ದಕ್ಷಿಣ ಕನ್ನಡದ ಗೌಡರು ಮತ್ತು ಆರಾಧನಾ ಪರಂಪರೆ
ಲೇಖಕರು : ಡಾ. ಹೂವಪ್ಪ ಕಣಿಯೂರು
ಸಹಪ್ರಾಧ್ಯಾಪಕರು
ಸರಕಾರಿ ಪ್ರಥಮ ದರ್ಜೆ ಕಾಲೇಜು, ಸುಳ್ಯ, ದ.ಕ.
ತುಳುನಾಡಿನ ಸುಬ್ರಹ್ಮಣ್ಯ, ಸುಳ್ಯ, ಬೆಳ್ತಂಗಡಿ, ಪುತ್ತೂರು, ವಿಟ್ಲ, ಬ೦ಟ್ವಾಳಗಳಲ್ಲಿ ಗೌಡರು ಬಹು ಸಂಖ್ಯೆಯಲ್ಲಿ ನೆಲೆಸಿದ್ದಾರೆ. ಕೊಡಗಿನ ಭಾಗಮಂಡಲ, ಕಾಸರಗೋಡಿನ ಬದಿಯಡ್ಕಗಳಲ್ಲಿ ಗೌಡರು ವಿರಳವಾಗಿದ್ದಾರೆ. ಗೌಡರು ತುಳುನಾಡಿಗೆ ವಲಸಿಗರು. ಪ್ರಾಚೀನವಾಗಿ ಶಿರಾಡಿ, ಸುಬ್ರಹ್ಮಣ್ಯ (ಶಿಶಿಲ) ಬ೦ಗಾಡಿಯ ಶಠಡ್ತಿಕಲ್ಲು ತುಳುನಾಡಿಗೆ ಸಂಪರ್ಕ ಕಲ್ಪಿಸುವ ಘಟ್ಟ ಮೂಲ ರಹದಾರಿಗಳಾಗಿದ್ದವು. ಈ ದಾರಿಗಳ ಮೂಲಕ ಗೌಡರು ತುಳುನಾಡಿಗೆ ಬಯಲು ಸೀಮೆಯಿಂದ ಹಾಸನದ ಐಗೂರು ಸೀಮೆಯ ಮೂಲಕ ಬಂದವರು. ಮಲೆನಾಡಿನಲ್ಲಿ ಚದುರಿ ಗೊ೦ಡಿದ್ದ ಗ೦ಗಡಿಕಾರ ಒಕ್ಕಲಿಗರು ತುಳುನಾಡಿಗೆ ಪಸರಿಸುವಲ್ಲಿನ ಭಿನ್ನ ಕಾರಣಗಳನ್ನು ವಿದ್ವಾಂಸರು ಚರ್ಚಿಸಿದ್ದಾರೆ. ಆ ಪ್ರಕಾರ ಐಗೂರು ಸೀಮೆಯಲ್ಲಿ ಕೆಂಡದ ಮಳೆ ಬಂದು ಹೇಮಾವತಿ ನದಿ ಮೂಲ ಬತ್ತಿ ಹೋದದ್ದು, ರಂಗಪ್ಪ ನಾಯಕನು ಐಗೂರು ಸೀಮೆಯಲ್ಲಿ ಕ್ರೂರವಾಗಿ ಆಡಳಿತ ನಡೆಸಿದ್ದು, ಕಾಗೆನೂರು ಮತ್ತು ಸುಬ್ರಹ್ಮಣ್ಯಕ್ಕೆ ಇದ್ದ ವ್ಯವಹಾರಿಕ ಸ೦ಬ೦ಧ, ಘಟ್ಟದಾರಿಯಲ್ಲಿ ಈ ಪ್ರದೇಶಗಳಿಗಿದ್ದ ಪ್ರಾಕೃತಿಕ ಸಂಪರ್ಕ ಸೌಲಭ್ಯಗಳು ಕಾರಣವಾಗಿವೆ. ಗೌಡರ ವಲಸೆ ಪ್ರಕ್ರಿಯೆ ತುಳುನಾಡಿಗೆ ಕೆಳದಿಯರಸರ ಜಾತಿ ಮೂಲ ಕಾರಣವಾಗಿ ಆಗಿದೆಯೆನ್ನುವುದು ಡಿ.ಜಿ. ನಡ್ಕರ ಅಭಿಪ್ರಾಯ. ಈ ಕಾರಣಗಳಲ್ಲದೆ ಸುಳ್ಯ ಪರಿಸರದಲ್ಲಿ ಮೌಖಕವಾದ ಇತರ ಕಾರಣಗಳು ಲಭಿಸುತ್ತವೆ. ಸುಳ್ಯದಲ್ಲಿ ಅಲ್ಲಿನ ಬಲ್ದಾಳರ ತರುವಾಯ ಅಧಿಕಾರ ನಡೆಸಿದ ಕೇರಳ ಮೂಲದ *ಚಾತು ನಾಯರ್' ಒಕ್ಕಲಿಗರನ್ನು ಶೃಂಗೇರಿಯ ಮಠಾಧಿಪತಿಗಳ ಅನುಮತಿ ಮೇರೆಗೆ ಶಿರಾಡಿ, ಬಿಸಿಲೆ, ಸುಬ್ರಹ್ಮಣ್ಯ ದಾರಿಯಲ್ಲಿ ತಂಡ ತಂಡವಾಗಿ 'ಕರೆದು ತಂದನೆಂದೂ ಹಾಗೆ ಕರೆ ತಂದವರನ್ನು ಮುನ್ನೂರೊಕ್ಕಲು, ಅರ್ವತ್ರೊಕ್ಕಲು, ಮೂವತ್ತೊಕ್ಕಲುಗಳೆಂದು ಊರು, ಗ್ರಾಮ ವ್ಯಾಪ್ತಿಯಲ್ಲಿ ನೆಲೆಗೊಳಸಿದನೆಂದೂ ಪ್ರತೀತಿ. ಒಕ್ಕಲುಗಳ ಸಂಖ್ಯೆಯಲ್ಲಿ ಕರೆದುಕೊಳ್ಳುವ ಊರು, ಗ್ರಾಮಗಳು ವರ್ತಮಾನದಲ್ಲೂ ಇವೆ. ಈ ಪ್ರತೀತಿಯ ಪಳೆಯುಳಿಕೆಗಳು ಸತ್ತು ದೈವವಾಗಿದ್ದಾನೆನ್ನುವ “ನಾಯರ್' ದೈವದ ಆರಾಧನೆಯ ಆಚರಣೆಯ ಸ್ವರೂಪದಲ್ಲೂ ಕ೦ಡು ಬರುತ್ತದೆ. "ನಾಯರ್ ನೇಮ'ದಲ್ಲಿ ಕುಂಟು ಪೂಜಾರಿ'ಗಳ ಸಂಖ್ಯೆ ಗರಿಷ್ಟ 40ರಷ್ಟಿರುತ್ತದೆ. ಇವರು ನೇಮದ ಸಂದರ್ಭದಲ್ಲಿ ಮೈಮಾನಿಕೆಯಲ್ಲಿ (ದರ್ಶನ) ರುವಾಗ, ನಾಯರ್ ದೈವ ಕಲಾವಿದ, ನಾನು ಕರೆದು ತಂದ ಪರಿವಾರದಲ್ಲಿ ಒಂದಾದರೂ ಇದೆಯೆ ಎನ್ನುವ ರ್ಥದಲ್ಲಿ ನುಡಿದು ಇಣುಕಿ ನೋಡುವ, ಅಭಿನಯಿಸುವ ಕ್ರಮವಿದೆ.
ಭಿನ್ನ ಕಾರಣಗಳಿಗಾಗಿ ಸೀಮೋಲ್ಲಂಘನ ಮಾಡಿದ ಗೌಡರು ಮುಖ್ಯವಾಗಿ ನೇತ್ರಾವತಿ, ಕುಮಾರ ಧಾರ ಮತ್ತು ಪಯಸ್ಪಿನಿ ನದಿ ಮೂಲಗಳನ್ನು ಆಶ್ರಯಿಸಿ ಪಸರಿಸಿಕೊಂಡಿದ್ದಾರೆ. ಈ ಗೌಡರು ವಿಸ್ತರಿಸಿಕೊಂಡ ಪ್ರದೇಶಗಳಲ್ಲಿ ಶಿರಾಡಿ, ಪುರುಷ, ಬಚ್ಚನಾಯಕ ದೈವಗಳು ಬಹುಮಾನ್ಯವಾಗಿ ಆರಾಧನೆ ಯಾಗುತ್ತಿವೆ. ಈ ದೈವಗಳು ಕೂಡ ಘಟ್ಟ ಪ್ರದೇಶದಿಂದ ಪ್ರವೇಶಿಸುವ ಮತ್ತು ಪ್ರಸರಣವಾಗುವ ದಾರಿಗಳನ್ನು ಅವುಗಳ ಪಾಡ್ದನಗಳು, ಗೌಡರು ತುಳುನಾಡಿಗೆ ಪ್ರವೇಶಿಸಿದ ದಾರಿಗಳನ್ನೇ ಉಲ್ಲೇಖಿಸುತ್ತವೆ. ಈ ದೃಷ್ಟಿಯಿಂದ ಗೌಡರ ವಲಸೆಯ ಚಾರಿತ್ರಿಕತೆಯನ್ನು ತಿಳಿಯಲು ಇವು ದಿಕ್ಸೂಚೆಯಂತಿವೆ. ಆದರೂ ಬಚ್ಚನಾಯಕನ ದೈವ ಸುಳ್ಯ ಪರಿಸರಕ್ಕೆ ವಲಸೆಯಾಗುವಲ್ಲಿನ ಸಂಕಥನ ಭಿನ್ನವಾಗಿಯೂ ಇದೆ. ಗೌಡರ ಆರಂಭದ ವಲಸೆ ಕಾಲಕ್ಕಿಂತ ತರುವಾಯದಲ್ಲಿ ಈ ಬಚ್ಚನಾಯಕನ ಕುರಿತಾದ ಪಾಡ್ಬನ ಪ್ರಕಾರ ಅವನು ಯೇನೆಕಲ್ಲು ಪ್ರದೇಶವನ್ನು ಪ್ರವೇಶ ಮಾಡುವುದು ಗೌಡರಿಗೆ ಪೂರಕವಾಗಿರದೆ ವಿರೋಧಿ ನೆಲೆಯಲ್ಲಿದೆ. ಪಂಜದ ಬಲ್ಲಾಳನಿಗೆ ಕಂದಾಯ ಸಂದಾಯ ಮಾಡುವಲ್ಲಿ ಉದಾಸೀನನಾದ ಯೇನೆಕಲ್ಲು ಮಾಗಣೆಯ ನಾಲ್ಕೂರು ಗುತ್ತು ಮನೆಯ ಸುಬ್ಬ ಗೌಡನನ್ನು ದಂಡಿಸಲು ಬರುತ್ತಾನೆ. ಬಚ್ಚನಾಯಕನ ಆಗಮನದ ಮುನ್ಸೂಚನೆಯನ್ನರಿತ ಸುಬ್ಬೇ ಗೌಡರ ಆಣತಿಯಂತೆ, ಪಿಲಿಕಂದಡಿ (ಹುಲಿ ಕನ್ನಡ ಹಾವುಯ ವಿಷ ಸವರಿ ಅಡ್ಡೆಯಲ್ಲಿ ಮರೆಯಾಗಿ ಕುಳಿತು ಬಿಡುವ ಮುಗೇರರ ಬಾಣಕ್ಕೆ ಬಲಿಯಾಗಿ ಹೊಂಡದಲ್ಲಿ ಬಿದ್ದು ಬಚ್ಚನಾಯಕ ನರಳುತ್ತಾನೆ. ಹೊಂಡದಲ್ಲಿ ಬಿದ್ದ ಬಚ್ಚನಾಯಕನ ಮರಣಕ್ಕೆ ಅಂತಿಮವಾಗಿ ಕಾರಣವಾಗುವವರು ಸುಬ್ಬೇ ಗೌಡನ ಇಬ್ಬರು ಹೆಂಡತಿಯರು. ಒಬ್ಬಳು ನರಳುವ ಬಚ್ಚನಾಯಕನ ನರಳಾಟವನ್ನು ನಿಲ್ಲಿಸಲು ಕೊರಳಿಗೆ ಮೆಟ್ಟಿ ನಿಂತರೆ ಇನ್ನೊಬ್ಬಳು ಹೊರ ಚಾಚಿದ ನಾಲಗೆಯನ್ನು ಕತ್ತರಿಸುತ್ತಾಳೆ. ಮರಣದ ಲೌಕಿಕದಲ್ಲಿ ಐತಿಹಾಸಿಕ ವ್ಯಕ್ತಿಯಾದ ಬಚ್ಚನು ತನ್ನ ಮರಣ ಸಂದರ್ಭದಲ್ಲಿ ನಿಮ್ಮನ್ನು ಕಾಯುತ್ತೇನೆಂದೂ ನನ್ನನ್ನು ಆರಾಧಿಸಿಕೊಂಡು ಬನ್ನಿಯೆಂದು ಹೇಳಿ ಬಿಡುತ್ತಾನೆ. ಆ ಪ್ರಕಾರ ಅವನು ಮರಣದ ತರುವಾಯ ಆರಾಧನೆ ಪಡೆಯುತ್ತಾನೆ. ಆರಾಧನೆಯ ತಾಂತ್ರಿಕ ವಿಧಿಗಳಾದ ಭಂಗಿ ಸೇದುವ, ಅಡ್ಡನಾಮ ಹಾಕುವ ಅಲಂಕರಣ ಇತ್ಯಾದಿಗಳಲ್ಲಿ ಪುರುಷ, ಬಚ್ಚನಾಯಕ ದೈವಗಳು ವೀರ ನಾಯಕರಾಗಿ ಮತ್ತು ಗೌಡರೊಂದಿಗೆ ಮತ ಸಂಬಂಧವಾಗಿಯೂ ನೇರ ಸಂಬಂಧ ಹೊಂದುತ್ತವೆ.
ಒಕ್ಕಲಿಗ ಗೌಡರು ತುಳುನಾಡಿಗೆ ಪ್ರಸರಣವಾಗಿ ಯಜಮಾನಿಕೆಯನ್ನು ಸ್ಥಾಪಿಸಿಕೊಂಡದ್ದು ಸುಳ್ಯ, ಪುತ್ತೂರು ಪರಿಸರದಲ್ಲಿ ಮಾತ್ರ ಬಂಗಾಡಿ, ಶಿರಾಡಿಯ ಮೂಲಕ ಅಚ್ಚ ತುಳುನಾಡಿಗೆ ಇಳಿದ ಗೌಡರು ಈ ಬಗೆಯ ಯಜಮಾನಿಕೆಯನ್ನು ಸ್ಥಾಪಿಸಿಕೊಳ್ಳಲು ತ ಸಾಧ್ಯವಾಗಲಿಲ್ಲ. ಇದಕ್ಕಾಗಿ ಅವರು 20ನೇ ಶತಮಾನದ 70ರ ದಶಕದಲ್ಲಿ ಭೂಸುದಾರಣೆ ಕಾಯಿದೆ ಜಾರಿಯಾಗುವಲ್ಲಿಯವರೆಗೆ ಕಾಯ ಬೇಕಾಯಿತು ಎನ್ನುವುದು ಚಾರಿತ್ರಿಕ ಸತ್ಯ
ಗೌಡರ ಆರಾಧನಾ ಪರಂಪರೆ
ವಲಸಿಗರಾದ ಗೌಡರು ತುಳುನಾಡಿನ ಆದಿ ಮೂಲ ದೈವಾರಾಧನೆಯನ್ನು ಒಪ್ಪಿಕೊಳ್ಳುವಲ್ಲಿ ಕಾಲದ ಅನಿವಾರ್ಯತೆ ಇತ್ತು. ಬಹುಶಃ ಗೌಡರಲ್ಲೂ ಹಿರಿಯರ ಆರಾಧನೆ ಇದ್ದಿರಬಹುದಾದರೂ ಅದು ತುಳುನಾಡಿನ ದೈವಾರಾಧನೆಯ ಸ್ವರೂಪದಲ್ಲಿ ಇದ್ದಿರಲಾರದು. ಯಲಹಂಕ ಕೆಂಪೇಗೌಡನ ವಂಶಸ್ಥರ ಕುಲದೇವತೆ ಕೆಂಪಮ್ಮಯೆಂಬುದನ್ನು ಹ.ಕ. ರಾಜೇಗೌಡರು ದಾಖಲಿಸುತ್ತಾರೆ. ಹಾಗೆಯೇ ಇವರು ಭೈರವನಾರಾಧಕರಾಗಿದ್ದರೆನ್ನುವುದನ್ನು ಉಲ್ಲೇಖಿಸುತ್ತಾರೆ. ನಾಥಸಿದ್ಧ ಗೊರವ ಮೂಲ ಮುನಿಸ್ವಾಮಿಯ ಆರಾಧನೆ ಸುಳ್ಳ ಪರಿಸರದಲ್ಲಿದೆ. ಗೌಡರ ಮನೆಗಳಲ್ಲಿ ಪ್ರಾಚೀನವೆಂದು ಗುರುತಿಸಿಕೊಳ್ಳುವ ಯೇನಡ್ಕ, ಕುಂಚಡ್ಕ, ಮರ್ಕಂಜ ಗಳಲ್ಲಿ ಕೆಂಚಮ್ಮ ಹೊಸಕೋಟೆ ಸುಬ್ಬಮ್ಮ ಮುಂತಾದ ಕುಲಸ್ತೀ ದೈವಗಳನ್ನು ವರ್ತಮಾನದಲ್ಲೂ ಆರಾಧಿಸುತ್ತಾರೆ. ಈ ದೈವಗಳ ಆರಾಧನೆ ಗೌಡರು ಮೂಲದಲ್ಲಿ ಹಿರಿಯರಾಧನೆಯನ್ನು ನಡೆಸುತ್ತಿದ್ದುದರ ಕಡೆಗೆ ಗಮನಿಸುವಂತೆ ಮಾಡುತ್ತದೆ. ತರವಾಡು ಮನೆಗಳಲ್ಲಿ ಇಂದೂ ಭೈರವನಿಗೆ ಅಗೆಲು ಕೊಡುವುದರ ಮೂಲಕ ಆರಾಧಿಸಲಾಗುತ್ತದೆ.
ಗೌಡರು ವರ್ತಮಾನದಲ್ಲಿ ದೈವಾರಾಧನೆಯಲ್ಲಿ ಹೊಂದುವ ಸ್ಥಾನಗಳು ಅವರ ವಲಸೆಯ ಕಾಲದಲ್ಲಿ ಇದ್ದಿರಲು ಸಾಧ್ಯವಿಲ್ಲ. ಈ ಕೊರೆತಯನ್ನು ಮೀರುವ ಮತ್ತು ತಮ್ಮ ಅಸ್ತಿತ್ವವನ್ನು ಮರು ಸ್ಥಾಪಿಸು ಸಲುವಾಗಿ, ತುಳು ಬದುಕಿನೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಬೇಕಾದ ಅನಿವಾರ್ಯತೆ ಜೊತೆಗೆ ತಮ್ಮ ಅನನ್ಯತೆಯನ್ನು ಉಳಿಸಿಕೊಳ್ಳುವ ಪ್ರಶ್ನೆ ಅವರನ್ನು ಕಾಡಿದೆ. ಇದರ ಪರಿಣಾಮವಾಗಿ ಜೀವಿತದಲ್ಲಿ ಗೌಡರ ನಾಯಕ ಸ್ಥಾನದಲ್ಲಿದ್ದ ಬಹುಶಃ ಬಚ್ಚನಾಯಕ, ಪುರುಷನಂತಹ ವ್ಯಕ್ತಿಗಳನ್ನೇ ಮರಣದ ಬಳಿಕ ದೈವಾರಾಧನೆಯ ಸ್ವರೂಪ ಚೌಕಟ್ಟಿನಲ್ಲಿ ದೈವತ್ವದ ನೆಲೆಯಲ್ಲಿ ಆರಾಧಿಸಬೇಕಾಯಿತು.
ಗೌಡರು ಇಂದು ಆರಾಧಿಸಿಕೊಂಡು ಬರುತ್ತಿರುವ ದೈವಗಳು ಹಲವು. ಕೇರಳ ಮೂಲದ ಬೈನಾಟಿ, ವಿಷ್ಣುಮೂರ್ತಿ ಸಹಿತ ಕಲ್ಕುಡ-ಕಲ್ಲುರ್ಟಿ, ಪಂಜುರ್ಲಿ, ಗುಳಿಗ, ಮೈಸಂದಾಯ, ಕಡಂಬಳಿತ್ತಾಯ, ಹಳ್ಳತ್ತಾಯ, ಕೌಟುಂಬಿಕ ನೆಲೆಯಲ್ಲಿ ಶಾಕ್ತ ಮೂಲದ ರುದ್ರಾಂಡಿಯನ್ನು “ಜನನದ' ಅಥವಾ ಕುಟುಂಬದ ಧರ್ಮ ದೈವವನ್ನಾಗಿ ಆರಾಧಿಸುತ್ತಾರೆ. ಮುಖ್ಯವಾಗಿ ಯೋಧ ಗುಣಲಕ್ಷಣದ ಚಾತು ನಾಯರ್ ದೈವವನ್ನು ಪ್ರಧಾನವಾಗಿ ಆರಾಧಿಸುತ್ತಾರೆ.
ತುಳುನಾಡಿನಲ್ಲಿ ಜೈನ ಮತ್ತು ಬಂಟರಿಗೆ, ಹಾಗೆಯೇ ಆಸ್ತಿಯ ಹಸ್ತಾಂತರದೊಂದಿಗೆ ಇತರ ಸಮುದಾಯಗಳಿಗೂ ಸತ್ತು ಪಡ್ಡಿರೆ' ಮನೆಗಳಿರುವಂತೆ, ಸುಳ್ಯ ಪರಿಸರದಲ್ಲಿ ಗೌಡರಿಗೆ ರಾಚನಿಕ ದೃಷ್ಟಿಯಿಂದ ತೀರ ಭಿನ್ನವಾಗಿರುವ ಐನ್‌ಮನೆಗಳಿವೆ. ಈ ಮನೆಗಳು ಕೂಡ 'ಗುತ್ತುಮನೆ'ಗಳಾಗಿ/ಸೀಮೆಕಳ ಮನೆಗಳಾಗಿ ಗೌರವದ ನೆಲೆಯಲ್ಲಿ ಗುರುತಿಸಿಕೊಳ್ಳುತ್ತವೆ. ಗೌಡರ ಐನ್‌ಮನೆಗಳು ರಾಚನಿಕ ಮತ್ತು ಸಾಂಸ್ಕೃತಿಕವಾದ ವೈಶಿಷ್ಟ್ಯಗಳಿಂದಾಗಿ ಸಂಕೀರ್ಣವಾದವುಗಳಾಗಿವೆ. ಐನ್ ಮನೆಯೆಂದರೆ, ಕುಲದೈವ, ಮನೆದೈವ, ಧರ್ಮದೈವ, ಸುತ್ತು ಕುಲೆಗಳಾದ ಹಿರಿಯರ (ಗುರುಕಾರ್ನೂರರು) ಸ್ಥಾನಗಳಿಂದದೊಡಗೂಡಿ ಕುಟುಂಬದ “ಕರ್ತನ' (ಯಜಮಾನ) ನಿರ್ದೇಶನದಲ್ಲಿ ಕುಟುಂಬಸ್ಥರು ವಾಸಿಸುವ ಮನೆ. ಹೀಗೆ ಐದು ಅಂಶಗಳಿಂದ ಕೂಡಿದ ಮನೆ “ಐನ್' ಮನೆಯಾಗುತ್ತದೆ. ಇಷ್ಟೆಲ್ಲವನ್ನು ಹೊಂದಿರುವ ಮನೆ ಎಲ್ಲಾ ವಿಧದಲ್ಲಿಯೂ ಗೌಡರ ಸಾಮಾನ್ಯ ಮನೆಗಳಿಗಿಂತ ವೈಶಿಷ್ಟ್ಯಪೂರ್ಣವಾಗಿರುತ್ತದೆ.
ತುಳುನಾಡಿನ ಪಡ್ಡಿರೆ ಮನೆ, ಬಯಲು ಸೀಮೆಯ ತೊಟ್ಟಿ ಮನೆಗಳ ರಜಚನೆಗಳೊಂದಿಗೆ ಗೌಡರ ನಾಲ್ಕಂ ಕಣದ “ಐನ್ ಮನೆ'ಗಳ ರಾಚನಿಕ ಸಂಬಂಧಗಳನ್ನು ತುಲನಾತ್ಮಕವಾಗಿ ನೋಡಿದಾಗ ಅವುಗಳೊಳಗಿನ ಪರಸ್ಪರತೆಯಲ್ಲಿ ಒಂದು ಬಗೆಯ ಹೊಂದಾಣಿಕೆ ಇದ್ದಂತೆ ಕಂಡು ಬರುತ್ತದೆ. ಗೌಡರು ಬಯಲು ಸೀಮೆಯಿಂದ ವಲಸಿಗರಾದಾಗ, ಬಯಲು ಸೀಮೆಯಲ್ಲಿ ಸಾಮಾನ್ಯವಾಗಿರುವ ತೊಟ್ಟಿ ಮನೆಗಳ ರಚನಾ ವಿನ್ಯಾಸವನ್ನು ಸಂಕಲ್ಪಿಸಿರಬಹುದು. ಭೌಗೋಳಿಕ ಪರಿಸರ ರೂಪಿಸುವ ಸಾಂಸ್ಕೃತಿಕ ಬದುಕಿನ ಅಗತ್ಯತೆಗೆ ವಾಸದ ಮನೆಗಳು ನಿರ್ಮಾಣವಾಗುತ್ತವೆ. ಈ ಹಿನ್ನೆಲೆಯಲ್ಲಿ ತುಳುನಾಡಿನಲ್ಲಿ ಬಂದು ನೆಲೆ ಯಾದಾಗ, ಇಲ್ಲಿನ “ಗುತ್ತು ಬೂಡು'ಗಳವರ ಸುತ್ತು ಪಡ್ಟಿರೆ' ಮನೆಗಳಿಗೆ ಸಮಾನಾಂತರವಾಗಿ ಗೌಡರು ಕೂಡ “ಐನ್ ಮನೆ'ಗಳೆನ್ನುವ ವಾಸದ ಮನೆಗಳನ್ನು ರೂಪಿಸಿ ಕೊಂಡಿದ್ದಾರೆ.
ಸುಳ್ಯ, ಪುತ್ತೂರು, ಸುಬ್ರಹ್ಮಣ್ಯ ಪ್ರದೇಶಗಳಲ್ಲಿ ಉಲ್ಲಾಕುಳು ಆರಾಧನೆ ಮತ್ತು ಅವುಗಳ ಆಡಳಿತಾತ್ಮಕ ಸಮುದಾಯವಾಗಿ ಗೌಡರು ಬಹುಮುಖ್ಯರಾಗಿದ್ದಾರೆ. ಈ ಬಗೆಯ ಸಂಬಂಧ ಅನುಷ್ಠಾನಗೊಳ್ಳುವಲ್ಲಿ, ಗೌಡ ಸಮುದಾಯ ಮತ್ತು ಉಲ್ಲಾಕುಳುಗಳ ಪರಂಪರೆಯನ್ನು ಅನಾವರಣಗೊಳಿಸುವ ಬಹುಸಂಖ್ಯೆಯ ಐತಿಹ್ಯ ಮಾದರಿಗಳು ಸಿಗುತ್ತವೆ. ಈ ಐತಿಹ್ಯಗಳು ಏಕಕಾಲದಲ್ಲಿ ಗೌಡರು ಮತ್ತು ಉಲ್ಲಾಕುಳು ಹಾಗೆ ಬಲ್ಲಾಳರೊಂದಿಗೆ ಏರ್ಪಡುವ ಸಂಬಂಧಗಳನ್ನು ನಿರೂಪಿಸುತ್ತವೆ.
ಉಲ್ಲಾಕುಳುಗಳಂತಹ ಮತಮೂಲ ಪ್ರಭಾವಿ ದೈವಗಳು ಆದಿಕುಕ್ಕೆಯಿಂದ ಮೊದಲ್ಗೊಂಡು ಪ್ರಸರಣವಾಗುವಾಗ ಪ್ರಭಾವಿ ಗೌಡರ ಮೂಲ ಮನೆತನಗಳನ್ನು ಆಶ್ರಯಿಸುತ್ತವೆ. ಚೊಕ್ಕಾಡಿ ಪೂಜಾರಿ ಮನೆಯ ಗೌಡರಲ್ಲಿ, ಆರೆಂಬಿ ಗೌಡರಲ್ಲಿ, ಉಲ್ಲಾಕುಳು ಬ್ರಾಹ್ಮಣ ಮಾಣಿಗಳಾಗಿ ಬಂದು ಮೂರ್ತಿ ರೂಪದಲ್ಲಿ ನಿಲ್ಲುವಲ್ಲಿನ ಸಾಂಕೇತಿಕತೆ ಮಧ್ಯಯುಗೀನ ಮತೀಯ ಹಿನ್ನೆಲೆಯಲ್ಲಿ ಗಮನಾರ್ಹ. ಕುಕ್ಕಂದೂರು ಉಲ್ಲಾಕುಳು ಗೌಡ ಕುದುರೆ ಕುಂಳನಿಗೆ ಸಂಕಪಾಲ ರೂಪದಲ್ಲಿ ಕಂಡು ಬರುತ್ತಾರೆ. ಹೀಗೆ ಗೌಡರೊಂದಿಗೆ ಪ್ರಥಮತಃ ಭೇಟಿಯಾಗುವ, ತರುವಾಯ ಬಲ್ದಾಳ ರಿಂದ ಮಾಡ ಕಟ್ಟಿಸಿ ಆರಾಧನೆ ಹೊಂದುವಲ್ಲಿ ಜಾತಿ ಮೂಲ ಹಾಗೂ ಮತ ಮೂಲ ಪ್ರಭಾವದ ಹಿನ್ನೆಲೆ ಇದ್ದಂತೆ ತೋರುತ್ತದೆ.
ಗೌಡರ ಆರಾಧನಾ ಪರಂಪರೆಯನ್ನು ಪಳೆಯುಳಿಕೆ ಮತ್ತು ಪಲ್ಲಟ.
ಗೌಡರು ಶೈವದ ವಿಭಿನ್ನ ಶಾಖೆಗಳಲ್ಲಿ ಗುರುತಿಸಿಕೊಂಡವರಾಗುತ್ತಾರೆ. ಜೋಗಿ ಪುರುಷ, ಸಿದ್ಧವೇಷ, ಕೆಂಚಮ್ಮ ಮುನಿಸ್ವಾಮಿ, ಗೊರವ ಇತ್ಯಾದಿ ಗೌಡರಲ್ಲಿರುವ ಆರಾಧನಾ ಪರಂಪರೆಗಳು, ಗೌಡರ ಮತ ಮೂಲದ ಸಂಕೇತಗಳಾಗಿ ಗೋಚರಿಸುತ್ತವೆ. ಲಿಂಗಾಯಿತ ಮೂಲದ “ಬಳ್ಳಡ್ಕ' ಕಬರು ಬಳಿ ಗೌಡರ ಕುರಿತಾದ ಐತಿಹ್ಯವೂ ಇಲ್ಲಿಗೆ ಪೂರಕವಾಗಿದೆ. ವರ್ತಮಾನದ ಗೌಡ ಸಮುದಾಯ ಆ ಮೂಲದಿಂದ ಬಹುದೂರ ಕ್ರಮಿಸಿದೆ. ಅವರೀಗ ತಿರುಪತಿ ತಿಮ್ಮಪ್ಪನಿಗೆ ಮುಡಿಪು ಕಟ್ಟುತ್ತಾರೆ. ದಾಸಯ್ಯರ ಮೂಲಕ “ಹರಿಸೇವೆ' ಮಾಡಿಸುತ್ತಾರೆ. 'ಗೌಡ' ಧಾರೆಯ ಬದಲು ಬ್ರಾಹ್ಮಣ ಪೌರೋಹಿತ್ಯ “ಧಾರೆ'ಗೆ ವಾಲಿದ್ದಾರೆ. ಭೈರವ ಆರಾಧನೆಯನ್ನು “ಅಗೆಲು” ಕೊಡುವುದರ ಮೂಲಕ ಆಚರಿಸುತ್ತಾರಾದರೂ ಆದಿ ಚುಂಚನಗಿರಿಗೆ ಹರಕೆ ಒಪ್ಪಿಸುವ ಬದಲು ಶೃಂಗೇರಿಯ ಗುರು ಮತ್ತು ಗುರುಪೀಠಕ್ಕೆ ನಿಷ್ಠೆಯನ್ನು ತೋರಿಸುತ್ತಾರೆ. ಹಾಗಾಗಿಯೂ ಶೃಂಗೇರಿಯ ಗುರುಪೀಠಕ್ಕೆ ಒಪ್ಪಿಸುವ ಹರಕೆ ಪಕ್ಕದ ಕಿಗ್ಗದ ಭೈರವನಿಗೆ ಅದು ಒಪ್ಪಿತವಾಗುತ್ತಿರುವುದು ಗೌಡರು ಮೂಲತಃ ಶಿವಾಂಶ ಭೈರವನಾರಾಧಕರೆನ್ನುವುದಕ್ಕೆ ಸಾಕ್ಷಿಯಾಗಿದೆ. ಬಲ್ಲಾಳ ಮತ್ತು ವೈದಿಕ ಪುರೋಹಿತರ ಮೂಲಕ "ದೇವ ಕ್ರಿಯೆ'ಯಲ್ಲಿ ಆರಾಧನೆ ಹೊಂದಿ ಬಂದಿರುವ ಅರ್ವಾಚೀನ ಉಲ್ಲಾಕುಳು ಅರಾಧನೆಯೊಂದಿಗೆ ಗೌಡ ಸಮುದಾಯ ಹೊಂದುವ ಸಂಬಂಧದಲ್ಲಿ ಆಸ್ತಿಯ ಹಸ್ತಾಂತರದ ಸಂಬಂಧ ಮತ್ತು ಮಧ್ಯಕಾಲೀನ ಮತ ಸಂಬಂಧಿ ವಿಚಾರಗಳು ಅಂತರ್ಗತವಾಗಿವೆ. ಈ ಸಂಬಂಧ ಪ್ರಧಾನವಾಗಿ ಮತಕ್ಕೆ ಸಂಬಂಧಿಸಿದಂತೆ ಸಂಭವಿಸಿರುವ ಸಂಘರ್ಷವನ್ನು ಗೌಡರು ಕುಣಿಯುವ “ಸಿದ್ಧವೇಷ' ಅಭಿವ್ಯಕ್ತಿಸುತ್ತಿದೆ. ಪಂಡಿತ ಪರಂಪರೆಗೆ ಗೌಡರು ಒಡ್ಡಿರಬಹುದಾದ ಪ್ರತಿಭಟನೆ ಸಿದ್ಧವೇಷದಲ್ಲಿ ನಿರಸಗೊಳ್ಳುವುದು ಪ್ರಧಾನ ಅಂಶ (ಪುರೂಷೋತ್ತಮ ಬಿಳಿಮಲೆ; 1990). ಹಾಗಾಗಿಯೂ ಗೌಡರು ವೈದಿಕ ವೈಷ್ಣವದ ಪರವಾಗಿಯೇ ಪ್ರವರ್ತಿಸಿದ್ದಾರೆ. ಅಷ್ಟರ ಮಟ್ಟಿಗೆ ವೈಷ್ಣವ-ವೈದಿಕದ ರಹಸ್ಯ ಪ್ರಣಾಳಿಕೆಗಳು ಗೌಡರಂತಹ ಬಹುಸಂಖ್ಯಾತ ಸಮುದಾಯಗಳನ್ನು ಆಕರ್ಷಿಸುವಲ್ಲಿ ಯಶಸ್ವಿಯಾಗಿವೆ.
ತುಳುನಾಡಿನ ದೈವಾರಾಧನೆಯಲ್ಲಿ ಸಮುದಾಯಗಳ ಕುರಿತಾದ ಚಾರಿತ್ರಿಕತೆ ಇಡೆ. ಸಂಘರ್ಷಗಳ ಪದರಗಳಿವೆ. ಮುಖ್ಯವಾಗಿ ಮತೀಯ, ರಾಜಕೀಯ ಏರುಪೇರುಗಳನ್ನು ಹಾಗೆಯೇ “ಯಾಜಮಾನ್ಯ' ನೆಲೆಗಳನ್ನು ಹೊಂದಿದ ಸಂಕಥನಗಳಿವೆ. ಸುಳ್ಳ, ತ ಪುತ್ತೂರು ಪ್ರದೇಶಗಳಲ್ಲಿ ಗೌಡ ಸಮುದಾಯದ ಸ್ವಂತ ಭೂಮಾಲಿಕತ್ವ ಹೊಂದಿದವರಾಗಿರುವುದರಿಂದ ದೈವಾರಾಧನೆಯಲ್ಲಿ “ಯಾಜಮಾನ್ಯ' ನೆಲೆಯಲ್ಲಿ ಗುರುತಿಸಿಕೊಂಡಿದ್ದಾರೆ. ಬೆಳ್ತಂಗಡಿ, ಬಂಟ್ಜಾಳ ವ್ಯಾಪ್ತಿಯಲ್ಲಿ ದೈವಾರಾಧನೆಯಲ್ಲಿ ಗೌಡ ಸಮುದಾಯ ಬಹು ಸಂಖ್ಯೆಯಲ್ಲಿ ಮೊಕ್ತೇಸರಿಕೆಯೆಂಬ ಅಧಿಕಾರ ಸ್ಥಾನದಲ್ಲಿ ಗುರುತಿಸಿಕೊಳ್ಳುವ ಬದಲು ಸೇವಾರೂಪದ ಪೂಜಾರ್ಕೆಯಲ್ಲಿ ಗುರುತಿಸಿಕೊಳ್ಳುತ್ತಾರೆ. ರುದ್ರಾಂಡಿ, ಪಂಜುರ್ಲಿ, ಕಲ್ಕುಡ-ಕಲ್ಲುರ್ಟಿ ಹೀಗೆ ಮನೆತನದ ದೈವಗಳನ್ನು ಆರಾಧಿಸುವರಾಗಿರುತ್ತಾರೆಯೇ ಹೊರತು ಊರು, ಗ್ರಾಮ, ಸೀಮೆ ನೆಲೆಯಲ್ಲಿ ಗುರುತಿಸಿಕೊಳ್ಳುವ ಅರಸು, ದೈಯ್ಯೊಂಕುಳು, ರಾಜನ್ ದೈವಗಳನ್ನು ನಡೆಸಿ ಕೊಡುವ ಮುಖ್ಯ ಗುತ್ತು ಮನೆಯವರಾಗಿ ಬಲ್ಲಾಳ ಕಟ್ಟಳೆಯವರಾಗಿ ಬಹುಸಂಖ್ಯೆಯಲ್ಲಿ ಕಂಡುಬರುವುದಿಲ್ಲ; ಬಂದರೂ ವಿರಳ. ವಲಸಿಗ ಗೌಡರು ತುಳುವ ದೈವಾರಾಧನೆಯನ್ನು ಒಪ್ಪಿಕೊಳ್ಳುವಲ್ಲಿ ಸ್ಥಿತ್ಯಂತರದ ಬದುಕಿನೆದುರು ತೆರೆದುಕೊಂಡ ವಿಭಿನ್ನ ಆಯಾಮಗಳು ಕಾರಣವಾಗಿವೆ.
ಅನನ್ಯತೆಯ ಪ್ರಶ್ನೆಯೂ ಕಾಡಿದೆ. ಈ ಕಾರಣಗಳಿಗಾಗಿ ತಮ್ಮದೇ ಮೂಲದವಾಗಿರುವ ನಾಯಕ ನೆಲೆಯ ಪುರುಷ, ಬಚ್ಚನಾಯಕ ದೈವಗಳನ್ನು ತುಳುವ ದೈವಾರಾಧನಾ ಸ್ವರೂಪ ಚೌಕಟ್ಟಿನಲ್ಲಿ ಆರಾಧನೆಗೆ ತಂದಿದ್ದಾರೆ. ಮಾತೃ ಮೂಲೀಯ/ ಶಾಕ್ತ ಮೂಲ ಶಿರಾಡಿ, ರುದ್ರಾಂಡಿ ಇತ್ಯಾದಿ ಮಾತೃ ದೈವಗಳನ್ನು ಆಚರಿಸುತ್ತಾರೆ. ಮತೀಯ ಸಂಕ್ರಮಣ ಕಾಲದ ಅಗತ್ಯಕ್ಕೆ ಪೂರಕವಾಗಿ ಲಿಖಿತ (ವೈದಿಕ) ಮತ್ತು ಮೌಖಿಕ (ಜನಪದ)ಗಳ ಸಂಕಲನ ರೂಪದಲ್ಲಿ ಅಸ್ತಿತ್ವ ಪಡೆದಿರುವ ಉಲ್ಲಾಕುಳುಗಳಂತಹ ದೈವಗಳನ್ನು ಆಸ್ತಿಯ ಹಸ್ತಾಂತರದೊಂದಿಗೆ ಒಪ್ಪಿಕೊಂಡಿದ್ದಾರೆ. ಈ ಮೂಲಕ ತುಳುವ ಸಾಂಸ್ಕೃತಿಕತೆಯಲ್ಲಿ ಗೌಡರು ಸ್ವಕೀಯರಾಗಿದ್ದಾರೆ.
ಈಗಿನ ಹಾಸನ ಜಿಲ್ಲೆಯ ಐಗೂರು ಸೀಮೆಯಲ್ಲಿ ಸ್ಥಳೀಯ ಪಾಳೆಯಗಾರನೊಬ್ಬ ಕಟ್ಟದ “ಹೊಸಕೋಟೆ ಕೆಂಚಮ್ಮಳ ದೇವಸ್ಥಾನ'ವಿದೆ. ಇದು ಮೂಲತಃ ಜನಪದರು ಆರಾಧಿಸಿಕೊಂಡು ಬಂದಿದ್ದ “ಕೆಂಚಮ್ಮ'ನದಾಗಿತ್ತು. 1604ರಲ್ಲಿ ಕೆಂಚಾಂಬಿಕೆ ಎಂಬ ಹೆಸರಿನಲ್ಲಿ ದೊಡ್ಡ ದೇವಸ್ಥಾನವಾಗಿ ಪರಿವರ್ತಿತವಾದ ಇದಕ್ಕೆ ಐಗೂರು ಪರಿಸರದ ಗೌಡರು ಈಗಲೂ ಹರಕೆ ಒಪ್ಪಿಸುವ ಪದ್ಧತಿ ಇದೆ. ಹಾಗೆನೆ ಸಕಲೇಶಪುರ ತಾಲೂಕಿನ ಕೂಡು ರಸ್ತೆಯ ಬಳಿಯಲ್ಲಿರುವ ಒಣಗೂರು ಸಬ್ಬಮ್ಮ ದೈವವೂ ನೇರವಾಗಿ ಸುಳ್ಯ ಪರಿಸರದ ಗೌಡರೊಂದಿಗೆ ಸಂಬಂಧ ಹೊಂದುತ್ತದೆ. ಗೌಡರು ಈ ಸಬ್ಬಮ್ಮ ದೈವಕ್ಕೆ ತಮ್ಮ ಮದುವೆ-ಶುಭ ಕಾರ್ಯದ ಸಂದರ್ಭಗಳಲ್ಲಿ ಕಾಳುಮೆಣಸಿನ ಹರಿಕೆಯನ್ನು ತೆಗೆದಿರಿಸುವ ಕ್ರಮವಿದೆ. ಈ ಪದ್ಧತಿಗಳ ಮೂಲಕ ತಾವು ಮೂಲದಲ್ಲಿ ಆರಾಧಿಸುತ್ತಿದ್ದ ದೈವಗಳಿಗೆ ನಿಷ್ಠೆ ತೋರಿಸುತ್ತಾರೆ. ಅಂದರೆ ತಮ್ಮ ಮೂಲ ಆರಾಧನಾ ಪದ್ಧತಿಯೊಂದಿಗೆ ಸಂಬಂಧ ಕಲ್ಪಿಸುತ್ತಾರೆ. (ಬಿಳಿಮಲೆ 1985) ಸುಳ್ಯ ಪರಿಸರದ ಗೌಡರಲ್ಲಿ ಮುಖ್ಯವಾಗಿ ಏನಡ್ಕ, ಪಣೆಮಜಲು, ಕೂಜುಗೋಡು, ಮರ್ಕಂಜ, ಕುಂಚಡ್ಕ ತರವಾಡು ಮನೆತನಗಳು ನೇರವಾಗಿ ಸಬ್ಬಮ್ಮ/ಕೆಂಚಮ್ಮ ದೈವಗಳನ್ನು ಮೂರ್ತಿ ಶಿಲ್ಪ ಅಥವಾ ಸಾನ್ನಿಧ್ಯ ಸಂಕಲ್ಪದೊಂದಿಗೆ ಆರಾಧಿಸುತ್ತಾರೆ. ಇದರಿಂದಾಗಿ ಗೌಡರು ಐಗೂರು ಪ್ರದೇಶದಿಂದ ಬಂಗಾಡಿಯ ಶಠಡ್ತಿಕಲ್ಲು, ಶಿರಾಡಿ ಮತ್ತು ಬಿಸಿಲೆ ಬೆಟ್ಟ ದಾರಿಗಳಲ್ಲಿ ಇಳಿದು ಬಂದಿರುವುದರ ಕುರಿತಂತೆ ತಿಳಿಯುತ್ತದೆ. ಸುಳ್ಯ ಪರಿಸರದಲ್ಲಿ ವಿಶೇಷವಾಗಿ ಗೌಡರಲ್ಲಿ ಮಾತ್ರ ಆರಾಧನೆಯಾಗುತ್ತಿರುವ ಸಬ್ಬಮ್ಮ/ಕೆಂಚಮ್ಮ ದೈವರಾಧನೆ ಗೌಡರದ್ದೇ ಕುಲ ಮೂಲದ ಮನೆ ದೇವತೆ ಎನ್ನುವುದನ್ನು ಸಾಕ್ತಿಕರಿಸುತ್ತದೆ.
ಸುಳ್ಯ ಪ್ರದೇಶದ ಗೌಡರೆಲ್ಲರೂ ಈ “ಸಬ್ಬಮ್ಮ'ನನ್ನು ಮನೆ ದೈವವಾಗಿ ಆರಾಧಿಸುವುದಿಲ್ಲ. ಇಲ್ಲಿ ಗೌಡ ಸಮುದಾಯವನ್ನು ಆರಾಧನಾ ಪರಂಪರೆಯ ಹಿನ್ನೆಲೆಯಲ್ಲಿ ಗಮನಿಸಿದಾಗ, ಈ ಸಂಬಂಧವಾಗಿ ಒಡಂಬಡಿಕೆಯೊಂದಾದರಿತೆ ಗೋಚರಿಸುತ್ತದೆ. ಆಯಾಯ ಮನೆತನದವರೇ ಹೇಳಿಕೊಳ್ಳುವಂತೆ, ಕುಂಚಡ್ಕದ "ಗುಂಡನ ಬಳಿ'ಯವರು ಕೆಂಚಮ್ಮನ ಆರಾಧನೆಯನ್ನು ಮಾಡುತ್ತಾರೆ.
ಗೌಡರಲ್ಲಿ ಸಬ್ಬಮ್ಮ ಲಕ್ಷ್ಮಿ ಮತ್ತು ವೆಂಕಟ್ರಮಣ ದೇವರುಗಳು “ಕುಟುಂಬದ ಕವಲು'ಗಳಲ್ಲಿ ಆರಾಧನೆಯಾದುವುದಕ್ಕೂ ಕಾರಣಗಳಿವೆ. ಗೌಡರು ಸುಳ್ಯ ಪ್ರದೇಶಕ್ಕೆ ಏಕಕಾಲದಲ್ಲಿ ವಲಸಿಗರಾಗಿಲ್ಲ. ಕಾಲಾನುಗತಿಯಲ್ಲಾಗಿದ್ದಾರೆ. ಗಂಗಡಿಕಾರ ಒಕ್ಕಲಿಗರು ಮಲೆನಾಡಿನಲ್ಲಿ ವಿಸ್ತರಿಸಿಕೊಂಡಾಗ, ಬಹುತೇಕವಾಗಿ ಹೊಯ್ಸಳರ ಕಾಲದಲ್ಲಿ ವೈಷ್ಣವದ ಪ್ರಭಾವಕ್ಕೆ ಒಳಗಾಗಿದ್ದಾರೆ. ಮಲೆನಾಡಿನ ನಾಮಧಾರಿ ಗೌಡರು ಈ ದೃಷ್ಟಿಯಿಂದ ಗಮನಾರ್ಹರು. ಇವರಿಗೆ ವೈಷ್ಣವ ಸಂಬಂಧ ಮೂಲ ವೆಂಕಟರಮಣ - ಲಕ್ಷ್ಮಿಯರು ಸೇರಿಗೆಯಾಗಿ ಇವರು ಅದರ ಆರಾಧಕರಾಗಿರುವ ಸಾಧ್ಯತೆ ಇದೆ. ಈ ಸಾಧ್ಯತೆಯ ಹಿನ್ನೆಲೆಯಲ್ಲಿ ಆದಿಮದಲ್ಲಿ, ಐಗೂರಿನಿಂದ ವಲಸಿಗರಾಗಿ ಗೌಡರಿಗೆ ಸಬ್ಬಮ್ಮ ಹಾಗೆಯೇ ವೈಷ್ಣವ ಪ್ರಭಾವಕ್ಕೊಳಗಾದ ಬಳಿಕ ವಲಸಿಗರಾದವರಿಗೆ ಲಕ್ಷ್ಮಿ-ವೆಂಕಟರಮಣರು ದೈವಗಳಾಗಿದ್ದಾರೆ. ತಿರುಪತಿಗೆ ಮುಡಿಪು ಕಟ್ಟುವ ಪದ್ಧತಿಯನ್ನು ಉಳಿಸಿಕೊಂಡು ತುಳುವ ದೈವಾರಾಧನೆಯನ್ನು, ಭೂ ಆಸ್ತಿ ಕಾರಣಗಳಿಗಾಗಿ ಹಸ್ತಾಂತರವಾದ ಭೂಸಂಬಂಧಿ ರುದ್ರಾಂಡಿ ಇತ್ಯಾದಿ ಮಾತ ಮೂಲೀಯ ದೈವಗಳನ್ನು ಗೌಡರು ಆರಾಧಿಸುವಂತಾಗಿದೆ.
ಸಬ್ಬಮ್ಮ /ಕೆಂಚಮ್ಮ ದೈವ ಸರೂಪ ಮತ್ತು ಆರಾಧನಾ ವಿಧಾನ
ಪಂಜದ ಏನಡ್ಕ, ಕಡಬದ ಪಣೆಮಜಲು ಮತ್ತು ಸುಬ್ರಹ್ಮಣ್ಯದ ಕೂಜುಗೋಡಿನಲ್ಲಿ ಸಬ್ಬಮ್ಮನ ಆರಾಧನೆ ಪ್ರತ್ಯೇಕ ಗುಡಿಗಳಲ್ಲಿ ಪ್ರತಿಮಾ ಮೂರ್ತಿಶಿಲ್ಪದೊಂದಿಗೆ ನಡೆಯುತ್ತದೆ.
ಐಗೂರಿನ ಕೆಂಚಮ್ಮ ಒಣಗೂರಿನ ಸಬ್ಬಮ್ಮರಿಗೆ ಹಿರಿಯರ ಕಾಲದಲ್ಲಿ ಕುರಿ, ಆಡು, ಕೋಣಗಳನ್ನು ಬಲಿ ಕೊಡುವುದರ ಮೂಲಕ ಆರಾಧನೆ ನಡೆಯುತ್ತಿತ್ತು. ಕಾಲಧರ್ಮಕ್ಕನುಗುಣವಾಗಿ ಇದು ಬದಲಾಗಿಯಾದರೂ ಅದರ ಸಾಂಕೇತಿಕತೆಗಳು ಇಂದೂ ನಡೆಯುತ್ತವೆ. ಶೈವ ಕಾಪಾಲಿಕರ ಮತ್ತು ಕೌಳರ ಕಾಳಿಯ ಆರಾಧನೆಯಲ್ಲಿ ನರ ಬಲಿಯು ಸಾಮಾನ್ಯ ಸಂಗತಿಯಾಗಿತ್ತು. ಈ ಪದ್ಧತಿ ಒಕ್ಕಲಿಗ ಮೂಲದಲ್ಲೂ ಇತ್ತೆಂದು ವಿದ್ವಾಂಸರು ಅಭಿಪ್ರಾಯಪಡುತ್ತಾರೆ. ಹಿರಿಯರು ಬಹಳ ಕಾಲದ ಹಿಂದೆ ಮನೆಯ ಹಿರಿಯ ಮಗಳನ್ನು ಬಲಿಕೊಡುತ್ತಿದ್ದ ಸಂಪ್ರದಾಯವಿತ್ತು. (ರಾಜೇ ಗೌಡ ಹ.ಕ.2007; 148) ಕೆಂಚಮ್ಮನ ಆರಾಧನೆಯ ಹಿಂದಿರುವ ಪ್ರತೀತಿ ಕೂಡ “ಬಲಿ'ದಾನದ ಸಂಗತಿಯನ್ನೇ ನಿರೂಪಿಸುವುದು ಇಲ್ಲಿಗೆ ಪೂರಕವಾಗಿದೆ. ಏನಡ್ಕದ ಸಬ್ಬಮ್ಮನಿಗೆ ಆಡು, ಹಂದಿ ಕಡಿಯುವುದು ಹಿಂದೆ ಇತ್ತೆಂದು ಹಿರಿಂತುರು ನಿರೂಪಿಸುತ್ತಾರೆ. ಕೋಳಿಯನ್ನಂತೂ ಕೊಯ್ಯುತ್ತಾರೆ. ಆದರೆ ಇದು ಕಾಲಾವಧಿಯಲ್ಲಿ ಮಾತ್ರ ನಡೆಯುತ್ತದೆ.
ಉಳಿದಂತೆ ನಿತ್ಯ ದೀಪಾರಾಧನೆ. ವಿಶಿಷ್ಟ ದಿನಗಳಲ್ಲಿ ಬ್ರಾಹ್ಮಣ ಪುರೋಹಿತರಿಂದ “ದೇವ ಕ್ರಿಯೆ'ಯಲ್ಲಿ ಸಾತ್ವಿಕ ಆರಾಧನೆ ನಡೆಯುತ್ತದೆ. ಮುಖ್ಯವಾಗಿ ಈ ಆರಾಧನೆ ವಾರ್ಷಿಕಾವರ್ತನದ ಬಿಸು, ಸೋಣ ಸಂಕ್ರಾಂತಿ, ಕಾವೇರಿ ಸಂಕ್ರಮಣ, ದೀಪಾವಳಿ ಇತ್ಯಾದಿ ಪರ್ವ ದಿನಗಳಲ್ಲಿ ಜರಗುತ್ತದೆ. ಸಬ್ಬಮ್ಮ ಗ್ರಾಮ ದೇವತೆಯಾಗಿ ಆರಾಧನೆಯಾಗುವ ಸಂದರ್ಭದಲ್ಲಿ ಆಕೆ ಮಾರಿಯಮ್ಮ ಬನದಮ್ಮ ಪಟಲದಮ್ಮ ದೊಡ್ಡಮ್ಮಳೆಂದು ಕರೆದುಕೊಂಡು "ರಕ್ತತರ್ಪಣ'ದೊಂದಿಗೆ ಆರಾಧನೆಯಾದರೆ ಮನೆದೈವವಾಗಿರುವಾಗ ತಾಯಿಯಂತೆ ಕುಟುಂಬವನ್ನು ಸಂಯಮದಿಂದ ಸಲಹುವ ರಕ್ಷಕಿಯಾಗಿ ಸಾತ್ವಿಕ ನೆಲೆಯಲ್ಲಿ ಆರಾಧನೆ ಪಡೆಯುತ್ತಾಳೆ.
ಸಬ್ಬಮ್ಮನ ಹೆಸರಿನ ಈ ಆರಾಧನೆ ಭೌಗೋಳಿಕವಾಗಿ ಸುಬ್ರಹ್ಮಣ್ಯ, ಕಡಬ, ಮರ್ಕಂಜ, ಆಲೆಟ್ಟಿ ಈ ಪ್ರದೇಶಗಳನ್ನೊಳಗೊಂಡ ಗೌಡ ಸಮುದಾಯದಲ್ಲಿ ನಡೆಯುತ್ತದೆ. ತುಳುನಾಡಿನ ಇತರ ಭಾಗಗಳಾದ ಪುತ್ತೂರು, ಬೆಳಂಗಡಿ, ವಿಟ್ಟ ಮುಂತಾದೆಡೆ ವಾಸಿಸುವ ಗೌಡ ಸಮುದಾಯದಲ್ಲಿ ಕಂಡು ಬರುವುದಿಲ್ಲ. ಈ ಪ್ರದೇಶದ ಗೌಡರು ಭಾಷಿಕವಾಗಿಂಯೂ ಗೌಡ ಕನ್ನಡವನ್ನಾಡುವುದಿಲ್ಲ. ತುಳುವೇ ಮಾತೃ ಭಾಷೆಯನ್ನಾಗಿ ಆಡುತ್ತಾರೆ. ಒಂದರ್ಥದಲ್ಲಿ ಅವರು ತುಳುವ ಸಂಸ್ಕೃತಿಂತುನ್ನ್ನು ಸಂಪೂರ್ಣ ಒಪ್ಪಿಕೊಂಡಿದ್ದಾರೆ. ಹಾಗಾಗಿ ಅವರಲ್ಲಿ ಆದಿ ಮೂಲದ ಆರಾಧನಾ ಪರಂಪರೆಂದರಾಗಿರುವ “ಸಬ್ಬಮ್ಮ' ನೆನಪಾಗಿಲ್ಲದಿರುವುದು ಅಸಹಜವೇನು ಅಲ್ಲ...