ಗೌಡಜನರು - ಬತ್ತದ ಬೇಸಾಯ ಬತ್ತದಿರಲಿ...

ಗೌಡಜನರು - ಬತ್ತದ ಬೇಸಾಯ ಬತ್ತದಿರಲಿ...

Feb 21, 2025

ಲೇಖಕರು: ಡಾ.ಕೆ. ಚಿನ್ನಪ್ಪ ಗೌಡ
ಪ್ರಾಧ್ಯಾಪಕರು, ಕನ್ನಡ ಅಧ್ಯಯನ ಸಂಸ್ಥೆ
ಮ೦ಗಳೂರು ವಿಶ್ವವಿದ್ಯಾಲಯ


ಸಂಸ್ಕೃತಿಯ ಮಜಲುಗಳನ್ನು ಅರಣ್ಯಸಂಸ್ಕೃತಿ ಕೃಷಿಸಂಸ್ಕೃತಿ ಮತ್ತು ವಾಣಿಜ್ಯಸಂಸ್ಕೃತಿ ಎಂಬುದಾಗಿ ಮೂರು ಹಂತಗಳಲ್ಲಿ ಗುರುತಿಸಬಹುದು. ಬಹುತೇಕ ಎಲ್ಲ ಜನಸಮುದಾಯಗಳು ಸಂಸ್ಕೃತಿಯ ಈ ಮೂರು ಮಜಲುಗಳ ಸಂಬಂಧವನ್ನುಪಡೆದುಕೊಂಡು ತಮ್ಮ ಬದುಕು ಮತ್ತು ಸಂಸ್ಕೃತಿಯನ್ನು ರೂಪಿಸಿಕೊಂಡಿವೆ ಒಂದು ಕಾಲಕ್ಕೆ ಅರಣ್ಯಸಂಸ್ಕೃತಿ ಮತ್ತು ಕೃಷಿಸ೦ಸ್ಕೃತಿ ಮುನ್ನಡೆಯಲ್ಲಿದ್ದು, ಇಂದು ವಾಣಿಜ್ಯಸಂಸ್ಕೃತಿಯು ವಿಜ್ರಂಭಿಸುತ್ತಿದೆ. ಬದಲಾದ ಆಧುನಿಕ ಕಾಲಘಟ್ಟದಲ್ಲಿ ಉತ್ಪಾದನೆ, ಹಂಚಿಕೆ, ಮಾರಾಟ ಮತ್ತು ವಾಣಿಜ್ಯಪರ ವ್ಯವಹಾರದ ವಿಧಾನಗಳಲ್ಲಿ ಪಲ್ಲಟಗಳಾಗಿರುವುದನ್ನು ಕಾಣಬಹುದು. ಕಾಡು ಮತ್ತು ಕಾಡಿನ ಉತ್ಪತ್ತಿಗಳನ್ನೇ . ಅವಲಂಬಿಸಿದ್ದ ಗುಡ್ಡಗಾಡು ಜನರ ಬದುಕು ಮತ್ತು ಸಂಸ್ಕೃತಿ ಒಂದು ಬಗೆಯದಾದರೆ ಹೊಲಗದ್ದೆಗಳು ಮತ್ತು ಬೇಸಾಯದ ಉತ್ಪನ್ನಗಳನ್ನು ಅವಲಂಬಿಸಿರುವ ಕೃಷಿಪರ ಬದುಕು ಮತ್ತು ಸಂಸ್ಕೃತಿಯ ವಿನ್ಯಾಸ ಮತ್ತೊಂದು ಬಗೆಯದಾಗಿದೆ. ಉತ್ಪಾದನೆಯ ಸಂಬ೦ಧವೇ ಇಲ್ಲದೆ ತಮ್ಮ ನಿಜವಾದ ಅವಶ್ಯಕತೆ ಗಳನ್ನು ಮೀರಿ ರಾಶಿ ಹಾಕಿರುವ ವಸ್ತುಗಳನ್ನು ತಕ್ಷಣದ ಆಕರ್ಷಣೆಗೆ ಒಳಗಾಗಿ ಕೊಂಡುಕೊಂಡು ಗುಡ್ಡೆಹಾಕುವ, “ಮಾಲ್‌'ಗಳು ರೂಪಿಸುವ “ಕೊಳ್ಳುಬಾಕ' ಸಂಸ್ಕೃತಿಯ ಸ್ವರೂಪ ಇನ್ನೊಂದು ಬಗೆಯದು. ಹೀಗೆ ದುಡಿಮೆ, ಉತ್ಪಾದನೆ ಮತ್ತು ಒಡೆತನದ ಮನೋ ಧರ್ಮಗಳನ್ನು ಬೇರೆಬೇರೆ ಕಾಲಘಟ್ಟದ ಸಂಸ್ಕೃತಿಗಳು ವಿಭಿನ್ನವಾಗಿ ರೂಪಿಸಿವೆ. ಈ ಹಿನ್ನೆಲೆಯಲ್ಲಿ ಪರಂಪರಾ ಗತವಾಗಿ “ತುಳುನಾಡು' ಎ೦ದು ಹೆಸರು ಹೊಂದಿರುವ ಪ್ರಸ್ತುತ ದಕ್ಷಿಣ ಕನ್ನಡ ಜಿಲ್ಲೆಯ ಗೌಡಸಮುದಾಯದ ಕೃಷಿಸಂಸ್ಕೃತಿ ಮತ್ತು ಅದರ ಪಲ್ಲಟದ ಕಾರಣ ಮತ್ತು ಪರಿಣಾಮಗಳನ್ನು ನೋಡಬಹುದು.


ದಕ್ಷಿಣ ಕನ್ನಡ ಜಿಲ್ಲೆಯ ಗೌಡರ ಪ್ರಧಾನ ಕಸುಬು ಬತ್ತದ ಬೇಸಾಯವಾಗಿದ್ದು, ಇಂದು ತೆಂಗು, ಅಡಿಕೆ, ರಬ್ಬರ್‌- ಇತ್ಯಾದಿ ವಾಣಿಜ್ಯಬೆಳೆಗಳನ್ನು ಬೆಳೆಸುತ್ತಿದ್ದಾರೆ.ಗೌಡರು ಅಥವಾ ಅಖಿಲ ಕರ್ನಾಟಕ ಮಟ್ಟದಲ್ಲಿ ಒಕ್ಕಲಿಗರು ಎಂದು ಕರೆಯಲಾಗುವ ಈ ಜನರು ನೆಲವನ್ನು ಒಕ್ಕುವ ಮೂಲಕ, ಒಕ್ಕಿ ಮಣ್ಣನ್ನು ಹದಮಾಡುವ ಮೂಲಕ ಬೇರೆಬೇರೆ ಬೆಳೆಗಳನ್ನು ಬೆಳೆಸುತ್ತಾ ಬಂದಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯನ್ನು ನಿರ್ದಿಷ್ಟವಾಗಿ ಇಟ್ಟುಕೊಂಡು ನೋಡುವುದಾದರೆ, ಇಲ್ಲಿಯ ಗೌಡ ಜನರು ಒಂದೋ ಬೇಸಾಯದ ಗದ್ದೆಗಳ ಒಡೆಯರಾಗಿ ಅಥವಾ ಬೇಸಾಯ ಗದ್ದೆಗಳಲ್ಲಿ ಕೂಲಿಯಾಳುಗಳಾಗಿ ತಮ್ಮನ್ನು ತಾವು ಮುಖ್ಯವಾಗಿ ತೊಡಗಿಸಿಕೊ೦ಂಡದ್ದು ಕಂಡುಬರುತ್ತದೆ. ಬೇಸಾಯ ಮತ್ತು ಅದಕ್ಕೆ ಸಂಬಂಧಿಸಿದ ಕೈಕಸುಬುಗಳನ್ನು ಇವರು ಮಾಡುತ್ತಾ ಬಂದಿದ್ದಾರೆ. ಬೇಸಾಯಕ್ಕೆ ಸಂಬಂಧಿಸಿದ ಅನೇಕ ಆಚರಣೆಗಳನ್ನು ರೂಪಿಸಿಕೊಂಡಿದ್ದಾರೆ. ಗೌಡಜನರು ಇಹಪರವಾದ ಲೋಕದೃಷ್ಟಿಯನ್ನು ಹೊಂದುವುದಕ್ಕೆ ಬೇಸಾಂತುದ ಕಾರಣವಿದೆ. ಬೇಸಾಯವು ರೂಪಿಸಿರುವ ಗೌಡಜನರ ಸಾಂಸ್ಕೃತಿಕ ಲೋಕವು ಸಮೃದ್ಧವಾಗಿದೆ. ಬೇಸಾಯದ ಬದುಕಿನ ಲ್ಲಾಗಿರುವ ಪಲ್ಲಟಗಳು ಗೌಡಜನರ ಬದುಕನ್ನು ಆಧುನಿಕಗೊಳಿಸಿದೆಯಾದರೂ ಇವರು ಕಳೆದು ಕೊಂಡಿರುವ ಸಾಂಸ್ಕೃತಿಕ ಸ೦ಗತಿಗಳು ಅಪಾರವಾಗಿವೆ.


ಬೇಸಾಯವು ಒಂದು ಪ್ರಮುಖ ಉತ್ಪಾದನಾ ವಿಧಾನವಾಗಿರುವುದರ ಜೊತೆಗೆ ಅವರಲ್ಲಿ ಬದುಕಿನ. ಕುರಿತಂತೆ ಅನೇಕ ಚಿ೦ತನೆಗೆಳನ್ನು ಹುಟ್ಟುಹಾಕಿದೆ. ನೆಲ,ಬಾನು. ಬೆಳೆ, ಮಳೆ, ಸ್ಟಗ , ನರಕ, ಜನ್ಮ ಪುನರ್ಜನ್ಮ ಪಾಪ, ಪುಣ್ಯ, ಗಂಡು-ಹೆಣ್ಣು - ಹೀಗೆ ನಿಸರ್ಗ, ಕುಟುಂಬ ಇತ್ಯಾದಿ ಪರಿಕಲ್ಪನೆಗಳ ಕುರಿತಂತೆ ಗೌಡಜನರ ಗ್ರಹಿಕೆಗಳನ್ನು ಬೇಸಾಯವು ರೂಪಿಸಿದೆ. ಬೇಸಾಯದ ಬಗೆಗೆ ಗೌಡಜನರು ಹೊಂದಿರುವ ದೇಶೀಯ ಜ್ಞಾನಪರಂಪರೆಯು ಅನನ್ತವಾದುದು. ದೇಶೀಯ ಜ್ಞಾನಪರಂಪರೆಯ "ಅನಾವರಣದ ಕಡೆಗೆ ಸಂಸ್ಕೃತಿ ಚಿ೦ತಕರು ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಒಲವನ್ನು ತೋರಿಸುತ್ತಿದ್ದಾರೆ. ಗೌಡಜನರು ಪಾಲಿಸುತ್ತಿರುವ ವಾರ್ಷಿಕಾವರ್ತನ ಮುತ್ತು ಜೀವನಾವರ್ತನ ಆಚರಣೆಗಳಲ್ಲಿ ಬೇಸಾಯದ ಪಾಲು ಅಧಿಕವಾಗಿದೆ. ಎಣೆಲು, ಸುಗ್ಗಿ ಮತ್ತು ಕೊಳಕೆ ಬೇಸಾಯದ ವಿಧಗಳು, ಬೇಸಾಯದ ಕ್ರಮಗಳ ಪೂರ್ವತಯಾರಿ, ಉಳುಮೆಯ ಕೆಲಸ, ಜಾನುವಾರು ಸಾಕಣೆ, ಜೈವಿಕ ಗೊಬ್ಬರ ತಂತತಾರಿ, ನೇಜಿ ಹಾಕುವುದು, ತೆಗೆಯುವುದು, ನೆಡುವುದು, ಸಂದಿ ಕಬಿತಗಳನ್ನು ಹಾಡುವುದು, ಪೈರು ಕೊಯ್ಯುವ ಮೊದಲು ಹಾಲೆರೆದು ಕೈಮುಗಿಯುವುದು, ಮನೆ ತುಂಬಿಸುವುದು, ಹೊಸಅಕ್ಕಿ ಊಟಮಾಡುವುದು, ಕಣಜ ಕಟ್ಟುವುದು, ಪೊಲಿಯ ಆಚರಣೆ - ಹೀಗೆ ಹತ್ತಾರು ಕೆಲಸಗಳು ಆಚರಣೆಗಳನ್ನು ಸಂಭ್ರಮದಿಂದ ನಡೆಸುತ್ತಾರೆ.
ಬತ್ತದ ತಳಿಯ ಆಯ್ಕೆಯಿಂದ ಹಿಡಿದು ಅದರ ಬೆಳೆಯ ಸಂರಕ್ಷಣೆ ಮತ್ತು ಬಳಕೆಯ ಪ್ರಕ್ರಿಯೆಯ ಎಲ್ಲಾ ಹಂತಗಳಲ್ಲಿ ಗೌಡಜನರ ಅನುಭವ ಮತ್ತು ತಿಳುವಳಿಕೆಯನ್ನು ಗುರುತಿಸಬಹುದು. ನೆಲದ ಬಳಕೆ ಮತ್ತು ಸಂರಕ್ಷಣೆ, ನೀರಿನ ಬಳಕೆ ಮತ್ತು ಸಂರಕ್ಷಣೆ, ಬತ್ತದ ಬಳಕೆ ಮತ್ತು ಸಂರಕ್ಷಣೆ - ಹೀಗೆ ಕೃಷಿಜಗತ್ತಿನ ಇವರ ದೇಶೀಯ ಜ್ಞಾನ ಪರಂಪರೆ ವಿಶಿಷ್ಟವಾದುದು. ಒಂದು ಕಾಲಕ್ಕೆ ಇವರು ಬೆಳೆಯುತ್ತಿದ್ದ ಬತ್ತದ ತಳಿಗಳನ್ನು ನೋಡಬಹುದು - ಅತಿಕಾರ, ಅಟ್ಟಾಸ್, ಅಜ್ಜಿಸಾಲೆ, ಅಲ್ಲಿಅಂಡೆ, ಕಯಮೆ, ಆರಾನ೦೦ಬ್ರ, ಉಬಾರ್‌ಮು೦ಡ, ಉರ್ಲಿ, ಊರಜೇಬಿ, ಎಥಿಪ್ಪಾಲೆ, ಎರೋಳ, ಓಟೆಚಜ್ಪಿ, ಕಜೆಕಯಮ್ಮೆ, ಕಜೆಬೊಳ್ಕರಿ, ಕಂಟಿ, ಕರಿಪತ್ತ, ಕರಿಯಜೇಜಿ, ಕಲಾರ್, ಕಾಪಿಕಜೆ, ಕಿನ್ನಿಸಾಲೆ, ಕಿರುಬಿಳಿಯ, ಕುಮೇರ್‌ಬಿದೆ, ಕೆಂಪುಕಯಮೈ, ಕುಂಕುಮ, ಕೊಕ್ಕೆಸಾಲೆ, ಕೊಳಂಜಿ. ಪಿಳ್ಳೆ, ಗಡಿಚಾಮೆ, ಗಂದಸಾಲೆ, ಗಿಡ್ಡನೆಲ್ಲು, ಚಿಟ್ಟಾನಿ, ಚುಂಗೆ, ಜೀರಸಾಲೆ, ಜೇಬಿ, ತೊನ್ನೂರು, ದೊಡ್ಡಜೇಬಿ, ನಗರಿನೆಲ್ಲು, ಪಾಳೆಕೂವ, ಪುತ್ತೂರು ಕಯಮ್ಮೆ, ಬಂಗಾರಕಡ್ಡಿ, ಬಡೆಕ್ಕಾಯಿ ಕಯಮ್ಮೆ, ಬಾಸುಮತಿ, ಬೀಟಿ, ಬೀರಸಾಲೆ, ಬುಗುತ್ತಿ, ಮಸ್ಸೂರಿ, ಮಲ್ಲಿಗೆ, ಮಸ್ಕತ್ತಿ, ರಾಜಕಯಮ್ಮೆ, ಸುಗ್ಗಿಕಯಮ್ಮೆ, ಸುಂಗಲ್ಲ್, ಕುಮಾರ, ಕುಸುಮ, ಇರ್ವನಂ೦ಬ್ರ, ಜ೦ರು, ಐಆರ್‌ಎಯಿಟ್‌, ಶಕ್ತಿ - ಹೀಗೆ ಬತ್ತದ ತಳಿಗಳ ಬೇರೆಬೇರೆ ಹೆಸರುಗಳು ಮತ್ತು ಅವುಗಳನ್ನು ಬೇಸಾಯಮಾಡುವ ಕ್ರಮಗಳ ಬಗೆಗೆ ಒಕ್ಕಲುತನ ಮಾಡುವ ಗೌಡಜನರ ವಿದ್ವತ್ತು ಅಪಾರವಾದುದಾಗಿದೆ.


ಬೇಸಾಯದ ಕೆಲಸಕ್ಕೆ ಪೂರಕವಾಗಿ ಮತ್ತು ಆಶಯಕ್ಕೆ ಅನುಗುಣವಾಗಿ ಅವರು ಕಟ್ಟಿ ಹಾಡಿರುವ ಕಬಿತಗಳು, ಸ೦ದಿಗಳು, ಉರಲ್‌ಗಳು ತುಳುಜಾನಪದದ ಶ್ರೀಮಂತವಾದ ಸಾಹಿತ್ಯಿಕ ಭಾಗವಾಗಿದೆ. ಗೌಡಜನರು ವಾಸಕ್ಕೆ ಕಟ್ಟಕೊಂಡಿದ್ದ ಮನೆಗಳು, ಹಟ್ಟಿ, ಕೊಟ್ಟಿಗೆಗಳು, ಅ೦ಗಳ, ಬಾವಿ, ಹಿತ್ತಿಲುಗಳು, ಬೇಸಾಯಕ್ಕೆ ಬೇಕಾದ ಸಲಕರಣೆಗಳು, ಮನೆಯೊಳಗಿನ ವಸ್ತುಗಳು ಮತ್ತು ಅಡುಗೆಯ ಸಲಕರಣೆಗಳು, ಅಲಂಕಾರ ಸಾಮಗ್ರಿಗಳು - ಹೀಗೆ ಅವರ ವಸ್ತುಸಂಸ್ಕೃತಿಯ ಜಗತ್ತನ್ನು ಬೇಸಾಯವು ರೂಪಿಸಿದೆ. ಗೌಡಜನರ ಆರಾಧನಾ ಪ್ರಪಂಚಕ್ಕೂ ಕೃಷಿಸಂಸ್ಕೃತಿಗೂ ನಿಕಟಸಂಬ೦ಧವಿದೆ. ಬೇಸಾಯ, ಸಾಹಿತ್ಯ, ಆರಾಧನೆ, ಆಚರಣೆ, ಕುಣಿತ, ಕ್ರೀಡೆ, ಬೇಟೆ, ವೈದ್ಯ - ಹೀಗೆ ಹಲವು ವಿಷಯಗಳ ಕುರಿತಂತೆ ಗೌಡಜನರು ಸ್ವಾಯತ್ತಜ್ಞಾನವನ್ನು ಈಗಲೂ ಹೊಂದಿದ್ದಾರೆ. ಬೇರೆಬೇರೆ ಸಂಗತಿಗಳನ್ನು ವಿವರಿಸಿಕೊಳ್ಳಲು ಭಾಷಿಕ ಸಂಪತ್ತನ್ನು ಬೆಳೆಸಿ ಕೊಂಡಿದ್ದಾರೆ. ತಮ್ಮ ಅನುಭವಗಳ ಆಧಾರದ ಮೇಲೆ ಜ್ಞಾನ ಪರಂಪರೆಯನ್ನು ಕಟ್ಟುತ್ತಾ ಬಂದಿದ್ದಾರೆ.


ಗೌಡಜನರ ಬದುಕು ಮತ್ತು ಆಲೋಜನೆಗಳನ್ನು ಅವರು ಪರಂಪರಾಗತವಾಗಿ ಅನುಸರಿಸಿಕೊಂಡು ಬ೦ದ ಬೇಸಾಯ ಸಂಸ್ಕೃತಿಯು ರೂಪಿಸಿದೆ. ನೆಲದ ಒಡೆಯರಾಗಿ, ಒಕ್ಕಲುಗಳಾಗಿ, ಕೂಲಿಕಾರ್ಮಿಕರಾಗಿ ಬೇಸಾಯದ ಸಂಬಂಧವನ್ನು ಇರಿಸಿಕೊಂಡಿದ್ದಾರೆ. ಬೇಸಾಯವು ಗೌಡರ ಮುಖ್ಯ ಆದಾಯದ ಮೂಲವೂ ಆಗಿದೆ. ಗೌಡರ ಭಾವನಾತ್ಮಕ ಸಂಬಂಧಗಳನ್ನು ಬೇಸಾಯದಂತಹ ಪರಂಪರಾಗತ ಕಸುಬು ನಿರೂಪಿಸಿದೆ. ಗೌಡಜನರ ಮನಸ್ಸು ನೆಲವನ್ನು. ಬೇಸಾಯದ ಗದ್ದೆಯನ್ನು, ಬೆಳೆಯನ್ನು ಮತ್ತು ಅದರ ಬಳಕೆಯನ್ನು ಕುರಿತಂತೆ ಪರಿಭಾವಿಸಿರುವ ಗ್ರಹಿಕೆಗಳು ಕೂಡಾ ಮುಖ್ಯವಾಗುತ್ತವೆ.


ಬೇಸಾಯವನ್ನು ಭಾವನಾತ್ಮಕವಾಗಿ ಗೌಡಜನರು ಗ್ರಹಿಸಿರುವುದರಿಂದ ಬೇಸಾಯದ ಹಲವು ಚಟುವಟಿಕೆಗಳು ಆಚರಣೆಯ ಸ್ವರೂಪವನ್ನು ಪಡೆದುಕೊಂಡಿವೆ. ಬೇಸಾಯದ ನೆಲ ಅವರಿಗೆ ಬರಿಯ ಒಂದು ಬೌತಿಕ ವಸ್ತುವಾಗದೆ ಪೂಜೆಗೆ ಅರ್ಹವಾಗುತ್ತದೆ. ಎಲ್ಲ ಕೆಲಸಗಳಿಗೆ ಮುಹೂರ್ತವನ್ನು ನಿಗದಿಪಡಿಸುತ್ತಾರೆ. ಬೇಸಾಯದಲ್ಲಿ ಬಳಕೆಯಾಗುವ ಮರದ ಹಾಗೂ ಲೋಹದ ಉಪಕರಣಗಳೂ ಪೂಜೆಗೆ ಅರ್ಹವಾಗುತ್ತವೆ. ಬೆಳೆ ಮತ್ತು ಜಾನುವಾರುಗಳ ರಕ್ಷಣೆಗೆ ದೈವಗಳನ್ನು ಸೃಷ್ಟಿಸಿಕೊಂಡಿದ್ದಾರೆ. ಪೈರನ್ನು ತಂದು ಮನೆ ತುಂಬಿಸಿಕೊಳ್ಳುತ್ತಾರೆ. ಕಣಜಕ್ಕೆ ನಮಸ್ಕರಿಸುತ್ತಾರೆ. ಸಂತಾನ ಮತ್ತು ಹಸಿವೆಯ ಪೂರೈಕೆಗಾಗಿ ಅಕ್ಕಿಯನ್ನು ವಾಸ್ತವವಾಗಿಯೂ ಸಾಂಕೇತಿಕವಾಗಿಯೂ ಬಳಸುತ್ತಾರೆ. ಗದ್ದೆಯನ್ನು ದೇವರಗದ್ದೆಯಾಗಿ, ಕಂಬಳಗದ್ದೆಯಾಗಿ ಗೌರವಿಸುತ್ತಾರೆ. ಅಳತೆಯ ಮಾಪನಗಳನ್ನು ಮತ್ತು ವ್ಯವಸಾಯ ಸಲಕರಣೆಗಳನ್ನು ಗೌರವಭಾವನೆಯಿಂದ ನೋಡುತ್ತಾರೆ. ಸಂತಾನದ ಮುಂದುವರಿಕೆಗೆ ಕಾರಣವಾಗುವ ಹೆಣ್ಣನ್ನು ಸೀಮಂತ, ಮದುವೆ ಇತ್ಯಾದಿ ಜೀವನಾವರ್ತನ ಆಚರಣೆಗಳ ಮೂಲಕ ಸತ್ಕರಿಸುವಂತೆ ನೆಲವನ್ನು ತಾಯ್ತನದ ಪ್ರೀತಿಯಿಂದ ಪೂಜಿಸುತ್ತಾರೆ. ನೆಲವನ್ನು ಹೆಣ್ಣಿನ ಪ್ರತೀಕವಾಗಿ ಗೌಡಜನರು ಕಂಡಿದ್ದಾರೆ. ಹೆಣ್ಣಿನ ಬದುಕಿನ ಅವಸ್ಥಾಂತರಗಳನ್ನು ನೆಲದಲ್ಲಿಯೂ ಗುರುತಿಸಿದ್ದಾರೆ. ಒಟ್ಟಿನಲ್ಲಿ ಗೌಡಜನರ ಲೋಕದೃಷ್ಟಿಯನ್ನು ಬೇಸಾಯವು ಅಂತಿಮವಾಗಿ ನಿರೂಪಿಸಿದೆ.

ಹೀಗೆ ಗೌಡ ಜನರು ತಮ್ಮ ಬದುಕು, ಸಂಸ್ಕೃತಿ ಮತ್ತು ಚಿಂತನಾ ವಿನ್ಯಾಸವನ್ನು ರೂಪಿಸುತ್ತಾ ಬಂದಿರುವ ಬೇಸಾಯ ಮತ್ತು ನೆಲದ ಸಂಬಂಧವನ್ನು ನಿಧಾನವಾಗಿ ಕಳೆದುಕೊಳ್ಳುತ್ತಾ ಬರುತ್ತಿದ್ದಾರೆ. ನೆಲವನ್ನು ಕಳೆದುಕೊಳ್ಳುತ್ತಿರುವುದಕ್ಕೆ, ಬೇಸಾಯವನ್ನು ಕಡಿಮೆಮಾಡಿರುವುದಕ್ಕೆ ಅಥವಾ ನಿಲ್ಲಿಸಿರುವುದಕ್ಕೆ, ಬತ್ತದ ಜೀಸಾಯವನ್ನು ಕೈಬಿಟ್ಟು ವಾಣಿಜ್ಯದ ಬೆಳೆಗಳಿಗೆ ಮಾರುಹೋಗಿರುವುದಕ್ಕೆ, ಬತ್ತ ಬೆಳೆಯುವ ಗದ್ದೆಗಳಲ್ಲಿ ಬಹುಮಹಡಿಗಳ ವಾಣಿಜ್ಯ ಸಂಕೀರ್ಣಗಳನ್ನು ನಿರ್ಮಿಸುತ್ತಿರುವುದಕ್ಕೆ ಕಟ್ಟುವುದಕ್ಕೆ - ಇವಕ್ಕೆಲ್ಲ ಕಾರಣಗಳಿರಬಹುದು. ಹಲವಾರು ಕಾರಣಗಳ ಜೊತೆಗೆ ಬಹಳ ಮುಖ್ಯವಾಗಿರುವ ಕಾರಣವೆಂದರೆ ಆರ್ಥಿಕವಾಗಿ ಲಾಭಹೊಂದುವ ಮತ್ತು ಹಣಮಾಡುವ ವಾಣಿಜ್ಯ ಪ್ರವೃತ್ತಿಯೇ ಆಗಿದೆ. ಈ ಪ್ರವೃತ್ತಿ ಕೇವಲ ಗೌಡಜನರ ಪ್ರವೃತ್ತಿ ಅಷ್ಟೇ ಅಲ್ಲ. ಕೃಷಿಸಂಸ್ಕೃತಿಯು ಪಲ್ಲಟಕ್ಕೆ ಒಳಗಾಗುತ್ತಿರುವುದರಿಂದ ಎದುರಾಗುತ್ತಿರುವ ಸಮಸ್ಯೆಗಳು ಕೂಡಾ ಇವರಿಗಷ್ಟೇ ಸೀಮಿತವಾಗಿ ಉಳಿದಿಲ್ಲ.


ಕರಾವಳಿ ಕರ್ನಾಟಕದ ಹಸಿರುಗದ್ದೆಗಳು ಒಂದೋ ಪಾಳು ಬಿದ್ದಿವೆ ಅಥವಾ ಪರಭಾರೆಯಾಗಿ ಕಾರ್ಯಾನೆಗಳು ಮತ್ತು ಕಟ್ಟಡಗಳ ತಾಣಗಳಾಗುತ್ತಿವೆ. ನದಿಗಳು ಬರಡಾಗುತ್ತಿವೆ. ಗುಡ್ಡಗಳು ಸಮತಟ್ಟಾಗುತ್ತಿವೆ. ಪ್ರಾಣಿಪಕ್ಷಿಗಳು ನಾಶವಾಗುತ್ತಿವೆ ಮತ್ತು ಬದುಕಿನ ಆಶ್ರಯಗಳನ್ನು ಕಳೆದುಕೊಳ್ಳುತ್ತಿವೆ. ಅಭಿವೃದ್ಧಿಯ ಹೆಸರಿನಲ್ಲಿ ಪರಿಸರ ಸಂಬಂಧಿಯಾದ ಮಾಲಿನ್ಯ ಉಂಟಾಗಿ ಮಾರಕ ರೋಗಗಳು ಜೀವಹಾನಿಗೆ ಕಾರಣವಾಗುತ್ತಿವೆ. ಎಲ್ಲ ಸಮುದಾಯಗಳಂತೆ ಗೌಡ ಸಮುದಾಯವು ಕೂಡಾ ಮೂಕಸಾಕ್ಷಿಯಾಗಬೇಕಾದ ದುರಂತ ಸನ್ನಿಹಿತವಾಗುತ್ತಿದೆ. ಗೌಡಜನರು ವ್ಯವಸಾಯ ಸಂಸ್ಕೃತಿಯಿಂದ ದೂರವಾಗುತ್ತಿರುವುದರಿಂದ ಅವರು ಕಟ್ಟಿ ಬೆಳೆಸಿದ ಶ್ರೀಮಂತವಾದ ಸಾಂಸ್ಕೃತಿಕ ಜಗತ್ತೊಂದು ಕಣ್ಮರೆಯಾಗುತ್ತಿದೆ. ಉಪ ಕಸುಬುಗಳು ಕಣ್ಮರೆಯಾಗುತ್ತಿವೆ. ಮೌಖಿಕವಾಗಿ ಬೆಳೆದುಬಂದ ಜ್ಞಾನವು ಅಂಚಿಗೆ ಸರಿಯುತ್ತಿದೆ. ಪ್ರಾಕೃತಿಕ ಸಂಪನ್ಮೂಲಗಳನ್ನು ದೋಚುವ ಪ್ರವೃತ್ತಿಯು ಪ್ರಬಲವಾಗುತ್ತಿದೆ. ಕಾಡು ಮತ್ತು ಬೇಸಾಯದ ಸಂಬಂಧ ಕಡಿದು ಹೋಗುತ್ತಿದೆ. ಅನುಭವ ಪರಂಪರೆಯೊಂದು ನಾಶವಾಗುತ್ತಿದೆ. ಕೃಷಿಲೋಕದ ಪದಸಂಪತ್ತು ಬಳಕೆಯ ಸಂದರ್ಭಗಳನ್ನು ಕಳೆದುಕೊಳ್ಳುತ್ತಿದೆ. ವಿತರಣೆ ಮತ್ತು ಹಂಚುವಿಕೆಯ ಮನೋಧರ್ಮವು ನಾಶವಾಗಿ ಸ್ಪರ್ಧೆ ಮತ್ತು ಆರ್ಥಿಕ ಲಾಭದ "ಕೊಳ್ಳೆಹೊಡೆಯುವ" ಪ್ರವೃತ್ತಿಯು ವಿಜೃಂಭಿಸುತ್ತದೆ. ಗೌಡಜನರ ಬತ್ತದ ಬೇಸಾಯ ಪರಂಪರೆಯು ಬತ್ತಿ ಬರಡಾಗದಂತೆ ನೋಡಿಕೊಳ್ಳಲು ಸಾಧ್ಯವೇ ಎಂಬುದು ಬಹಳ ದೊಡ್ಡ ಪ್ರಶ್ನೆಯಾಗಿದೆ. ಬತ್ತದ ಬೇಸಾಯ ಬತ್ತದಿರಲಿ ಎಂಬುದೇ ಸದ್ಯಕ್ಕೆ ಇಟ್ಟುಕೊಳ್ಳಬಹುದಾದ ಆಶಯವಾಗಿದೆ.