ಡಿಪಿಯ ಅವಾಂತರ
ಹಾಸ್ಯ ಕಥೆ
ಲೇಖಕರು: ಕಲ್ಯಾಣಿ ವಿಜಯಕುಮಾರ್
ರಾತ್ರಿ ಸುಮಾರು ಹತ್ತೂವರೆಗೆ ನನ್ನ ಮೊಬೈಲ್ ಹಾಡಲಾರಂಭಿಸಿತು. ಇಷ್ಟೊತ್ತಿಗೆ ಫೋನ್ ಮಾಡುವವರು ಯಾರು? ಊರಿಂದ ಏನಾದ್ರೂ.. ಊಹೂಂ ಇಷ್ಟೊತ್ತಿಗೆ ಎಲ್ಲಾ ಚೆನ್ನಾಗಿ ಉಂಡು ಗಡದ್ದಾಗಿ ನಿದ್ದೆ ಮಾಡುತ್ತಿರುತ್ತಾರೆ. ಪಕ್ಕದಲ್ಲಿ ಕುಳಿತ ಮಗಳಿಗೆ “ಬಂಗಾರಿ ನನ್ ಫೋನ್ ತಂದು ಕೊಡೆ” ಅಂದೆ. ಎದ್ದು ಹೋಗಿ ಚಾರ್ಜ್ ಗೆ ಹಾಕಿದ್ದ ಫೋನ್ ತಂದು ಕೊಟ್ಟಳು. ನೋಡಿದರೆ “ಬಿಟ್ ಸಾಫ್ಟ್ ಅಂಕುರ್” ಇವನ್ಯಾಕೆ ಇಷ್ಟೊತ್ತಿಗೆ ಫೋನ್ ಮಾಡುತ್ತಾನೆ. ಇವನು ಬಿಟ್ ಸಾಫ್ಟ್ ನಲ್ಲಿ ಮೂರು ತಿಂಗಳ ಹಿಂದೆ ತಾನೇ ಅಂಕುರಿಸಿದವ. ಈಗ್ಯಾಕೇ ಫೋನ್ ಎಂದು ಕಾಲ್ ರಿಸೀವ್ ಮಾಡಿದೆ.
“ಹಾಯ್ ಮ್ಯಾಮ್ “
“ಹಾಯ್ ಹೇಳಿ”
“ಸಾರಿ ಮ್ಯಾಮ್ ಇಷ್ಟೊತ್ತಿಗೆ ಡಿಸ್ಟರ್ಬ್ ಮಾಡಿದ್ದಕ್ಕೆ. ಮಲಗಿದ್ರಾ?” ಎಂತಹ ಪ್ರಶ್ನೆ. ಮಲಗಿದ್ರೆ ಫೋನ್ ಹೇಗೆ ರಿಸೀವ್ ಮಾಡ್ತೇನೆ. ಆದರೂ “ಇನ್ನೂ ಮಲಗಿಲ್ಲ. ಹೇಳಿ. ನೀವು ಕೇಳಿದ ಫೈನಾನ್ಸ್ ಕ್ಯಾಂಡಿಡೇಟ್ ಪ್ರೊಫೈಲ್ ಸಾಯಂಕಾಲನೇ ಕಳಿಸಿದ್ದೆ ಅಲ್ವಾ? ಸಿಕ್ಕಿಲ್ವಾ?’ ಕೇಳಿದೆ. ನಾನು ಗ್ಲೋಬಲ್ ಎಚ್‌ಆರ್ ಸೊಲ್ಯೂಷನ್ ನಲ್ಲಿ ಕನ್ಸಲ್ಟೆಂಟ್ ಆಗಿ ಕೆಲಸ ಮಾಡೋದು.
“ಹೋ ಅದು ಸಿಕ್ಕಿದೆ. ನಾನು ಈಗ ಆಫೀಸ್ ಬಗ್ಗೆ ಮಾತಾಡೋಕೆ ಅಲ್ಲ ಫೋನ್ ಮಾಡಿದ್ದು”
“ಮತ್ತೆ ಹೇಳಿ”
“ಮ್ಯಾಮ್ ನಾನು ನಿಮ್ಮ ಡಿಪಿ ನೋಡ್ತಾ ಇದ್ದೆ. ಹಾಗೆ ಮಾತಾಡ್ಬೇಕು ಅಂತ ಆಸೆಯಾಯಿತು.” ಡಿಪಿನಾ.. ಯಾವ ಡಿಪಿ.. ಹೋ ಕಳೆದ ತಿಂಗಳು ನನ್ನ ಮಗಳು ನನ್ನ ವ್ಹಾಟ್ಸಪ್ಪ್ ಡಿಪಿಯಲ್ಲಿ ನನ್ನ ಹಳೆಯ ಹತ್ತು ವರ್ಷದ ಹಿಂದಿನ ಒಂದು ಫೋಟೋ ಹಾಕಿದ್ದಳು.
“ಹೌದಾ? ಹ್ಮ್ಮ “ ಅಂದೆ.
“ಮ್ಯಾಮ್ ನೀವು ಎಷ್ಟು ಚೆನ್ನಾಗಿದ್ದೀರಾ. ನಿಮ್ಮ ಬ್ರೌನ್ ಐಸ್, ಬ್ರೌನ್ ಹೆಯರ್ ,, ಆ ಕ್ಯೂಟ್ ಸ್ಮೈಲ್ .. ವಾಹ್ ನೋಡ್ತಾನೆ ಇರ್ಬೇಕು ಅನ್ಸುತ್ತೆ. ನಂಗೆ ನಿಮ್ಮ ಮೇಲೆ ಸ್ಟ್ರಾಂಗ್ ಆಗಿ ಕ್ರಶ್ ಆಗಿದೆ ಮ್ಯಾಮ್.”
“ಕ್ರಶ್..” ನನ್ನ ಸ್ವರ ಸ್ವಲ್ಪ ಕಿರುಚಿದ ಹಾಗೆ ಇತ್ತು. ಬಲಗಡೆ ಗಂಡ ಎಡಗಡೆ ಮಗಳು ಕೂತಿದ್ದಾರೆ. ನನ್ನ ಮಗಳು ಕಿವಿಯಿಂದ ಇಯರ್ ಫೋನ್ ತೆಗೆದು ಏನಮ್ಮಾ ಕ್ರಶ್ ಅಂತಿದ್ದೀಯಾ. ಅವಳ ಕಿವಿ ನೋಡಿ ಇಯರ್ ಫೋನ್ ಹಾಕಿದ್ರೂ ಭಾರಿ ಚುರುಕು. ಅದೇ ನನ್ ಗಂಡ ಪಕ್ಕ ಇದ್ದಾನಲ್ಲ ಅವನಿಗೆ ಏನೂ ಕೇಳಿಸಿಲ್ಲ. ನ್ಯಾಷನಲ್ ಜಿಯೋಗ್ರಫಿನಲ್ಲಿ ಸಿಂಹ ಜಿಂಕೆಯ ಹಿಂದೆ ಓಡುವುದನ್ನು ಕಣ್ಣು ಬಾಯಿ ಬಿಟ್ಟುಕೊಂಡು ನೋಡುತ್ತಿದ್ದಾನೆ. ನನ್ನ ಮಗಳಿಗೆ ‘ಏನಿಲ್ವೇ ಸುಮ್ಮನಿರು’ ಎಂದು “ಅಂಕುರ್ ನಿಮ್ಮ ವಯಸ್ಸು ಎಷ್ಟು “ ಅಂತ ಕೇಳಿದೆ.
“ಜಸ್ಟ್ 23 ಕಂಪ್ಲೀಟೆಡ್ “ ಎಂದು ಹೆಮ್ಮೆಯಿಂದ ಹೇಳುತ್ತಾ “ಮ್ಯಾಮ್ ತ್ರೀ ಮಂತ್ಸ್ ಬ್ಯಾಕ್ ನ್ಯಾಷನಲ್ ಬಿಸಿನೆಸ್ ಕಾಲೇಜ್ ನಲ್ಲಿ ಎಂಬಿಎ ಇನ್ ಎಚ್ ಆರ್ ಮುಗಿಸಿದ್ದೇನೆ. ಗೋಲ್ಡ್ ಮೆಡಲಿಸ್ಟ್ ಮ್ಯಾಮ್ ನಾನು” ಎಂದ ಗರ್ವದಿಂದ.
“ಸೋ ನೈಸ್. ನನ್ನ ವಯಸ್ಸು ಎಷ್ಟು ಗೊತ್ತಾ?”
“ಎಷ್ಟು ಮ್ಯಾಮ್ ಒಂದು ಮೂವತ್ತು”
“ಊಹೂಂ ಇನ್ನೂ ಒಂದು ಹದಿನೈದು ಸೇರಿಸಿ.”
“ವಾಟ್ ನಿಮಗೆ 45 ವರ್ಷನಾ? ಐ ಕಾಂಟ್ ಬಿಲೀವ್ ಇಟ್. ನನ್ನ ಕಿವಿಗೆ ಕಾಲಿಫ್ಲವರ್ ಇಡ್ತಿದ್ದೀರಾ” ಅಂದ. ನಾನಲ್ಲ ನೀನೆ ಇಟ್ಕೋತಾ ಇದ್ದೀಯಾ ಅಂತ ಮನದಲ್ಲೇ ಹೇಳಿಕೊಂಡು “ಹೌದಪ್ಪ ನಂಗೆ ಅಷ್ಟು ವಯಸ್ಸಾಯಿತು. ಸುಮ್ಮನೆ ಕ್ರಶ್ ಗಿಷ್ ಅಂತ ಮಾತಾಡ ಬೇಡ” ಅಂದೆ.
“ನಾನು ನಂಬಲ್ಲ. ನಾನು ಡೈಲಿ ರಾತ್ರಿ ಮಲಗುವಾಗ ಬೆಳಿಗ್ಗೆ ಏಳುವಾಗ ನಿಮ್ಮ ಡಿಪಿ ನೋಡಿಲ್ಲ ಅಂದರೆ ನನಗೆ ಸಮಾಧಾನವೇ ಇಲ್ಲ ಮ್ಯಾಮ್. ಯು ಆರ್ ಸೋ ಬ್ಯೂಟಿಫುಲ್ . ಲವ್ ಯು ಆ ಲಾಟ್ . ಗುಡ್ ನೈಟ್. ನನ್ ಡ್ರೀಂನಲ್ಲಿ ನೀವೇ ಬರಬೇಕು” ಎಂದು ಹೇಳಿ ಫೋನ್ ಕಟ್ ಮಾಡಿದ. ಈ ಮಕ್ಕಳ ಸಹವಾಸ ಒಳ್ಳೇ ಪಿಕಲಾಟೆಯಾಯಿತಲ್ಲ ಎಂದು ಫೋನ್ ಪಕ್ಕಕ್ಕಿಟ್ಟು ಒಳಗೆ ಹೋಗಿ ಮಲಗಿದೆ.
ಬೆಳಿಗ್ಗೆ ಅಫೀಸಿಗೆ ಹೋದವಳು ಮೊದಲು ನನ್ನ ವ್ಹಾಟ್ಸಪ್ಪ್ ಡಿಪಿ ಬದಲಾಯಿಸಿದೆ. ನಾನು ಹಾಗೂ ನನ್ನ ಮಗಳು ಇರುವ ಒಂದು ಫೋಟೋ ಹಾಕಿದೆ. ಸ್ವಲ್ಪ ಹೊತ್ತು ಆದ ಮೇಲೆ ಅಂಕುರ್ ನಿಂದ ಒಂದು ಮೆಸೇಜ್ ಬಂತು. “ಮ್ಯಾಮ್ ನಿಮ್ಮ ತಂಗಿ ಕೂಡಾ ನಿಮ್ಮಷ್ಟೆ ಚೆನ್ನಾಗಿದ್ದಾಳೆ. ಆದರೂ ನಂಗೆ ನೀವೇ ಕ್ಯೂಟ್.” ಇದೇನಪ್ಪ ಕರ್ಮ ಅಂತ ಅವನಿಗೆ ರಿಪ್ಲೈ ಮಾಡಿದೆ. ಅದು ನನ್ನ ತಂಗಿ ಅಲ್ಲ ಮಯಾಶಯ ನನ್ನ ಮಗಳು ಅಂತ. ಅದಕ್ಕೆ ಈ ಹುಡುಗ ಒಂದು ರಾಶಿ ಸ್ಮೈಲ್ ಇಮೋಜೀ ಕಳಿಸಿ “ಮ್ಯಾಮ್ ನೀವು ಒಳ್ಳೇ ಚೆನ್ನಾಗಿ ಕಾಮಿಡಿ ಬೇರೆ ಮಾಡ್ತೀರಾ” ಅಂತ ಬರೆಯಬೇಕಾ!
ದಿನ ಬೆಳಿಗ್ಗೆ ಆದರೆ ಈ ಅಂಕುರ್ ಮೆಸೇಜ್ ಗಳ ಕಾಟ ಜಾಸ್ತಿಯಾಗತೊಡಗಿತು. ಅವನ ಆಫೀಸಿನಲ್ಲಿ ಎಚ್ ಆರ್ ಮ್ಯಾನೇಜರ್ ಆಗಿರುವ ಸ್ವಾತಿಗೆ ಒಂದು ದಿನ ಕೇಳಿದೆ. ಅವಳು ಸುಮಾರು ವರ್ಷದಿಂದ ಅಲ್ಲೇ ಕೆಲಸ ಮಾಡುವ ಕಾರಣ ನನಗೆ ಸ್ವಲ್ಪ ಕ್ಲೋಸ್. “ಸ್ವಾತಿ ಆ ಅಂಕುರ್ ಹೇಗೆ?” ಅಂತ. “ಅವನಾ?? ಪುಟಾಣಿ ಪಾಪಚ್ಚಿ. ತುಂಬಾ ಮುದ್ದು ಮುದ್ದಾಗಿದೆ. ಆದರೆ ಕೆಲಸಕ್ಕೆ ಕೂತ್ರೆ ಕೆಲಸ ಮುಗಿಯದೆ ಮಿಸುಕಾಡುವುದಿಲ್ಲ. ಸಿಕ್ಕಾಪಟ್ಟೆ ರಿಚ್ ಪಾರ್ಟಿ. ನಮ್ ಅಡ್ಮಿನ್ ಬ್ಲಾಕ್ ಹುಡುಗಿಯರೆಲ್ಲ ಅವನ ಹಿಂದೆ ಅಲೆದಾಡಿದ್ರೂ ಇವನು ಕ್ಯಾರೇ ಮಾಡಲ್ಲ.” ಅಂತ ಹೇಳಿದಾಗ ಪರ್ವಾಗಿಲ್ಲ ಹುಡುಗ ಒಳ್ಳೇ ಹುಡುಗನೇ ಇರ್ಬೇಕು ಅಂತ ಯೋಚಿಸಿದೆ.
ಅವತ್ತು ರಾತ್ರಿ ಹನ್ನೊಂದು ಗಂಟೆಗೆ ಅಂಕುರ್ ನಿಂದ ಮತ್ತೆ ಫೋನ್. ಸಾಮಾನ್ಯವಾಗಿ ಮೆಸೇಜ್ ಗಳೇ ಜಾಸ್ತಿ. ಕಾಲ್ ಮಾಡೋದು ಕಡಿಮೆ. ಯಾಕಪ್ಪಾ ಫೋನ್ ಅಂತ ಯೋಚಿಸುತ್ತಾ ರಿಸೀವ್ ಮಾಡಿದೆ. “ಮ್ಯಾಮ್ ನಿಮ್ಮತ್ರ ತುಂಬಾ ಮಾತಾಡ್ಬೇಕು ಅಂತ ಆಸೆ ಆಗ್ತಿದೆ. ನಂಗೆ ನಿದ್ದೆನೇ ಬರ್ತಿಲ್ಲ.” ಇದು ಒಳ್ಳೇ ಕತೆಯಾಯಿತಲ್ಲ. ಇವನಿಗೆ ನಿದ್ದೆ ಬಂದಿಲ್ಲ ಅಂದರೆ ನಾನೇನು ಮಾಡ್ಲಿ? ನನ್ ಗಂಡ ‘ಯಾರೆ ಅದು ಇಷ್ಟೊತ್ತಿಗೆ? ನಿನ್ನ ಬಾಲಪ್ರೇಮಿನಾ?” ಅಂದ. ನಾನು ಅಂಕುರ್ ಗೆ ‘ಯಾಕಪ್ಪಾ ಏನಾಯಿತು?”
“ಲೋನ್ಲೀನೆಸ್ಸ್ ಫೀಲ್ ಆಗ್ತಿದೆ”
“ಯಾಕೆ ನಿನ್ನ ಅಮ್ಮ ಅಪ್ಪ ಇಲ್ವಾ ಮನೆಯಲ್ಲಿ?”
“ಮಮ್ ಬಿಸಿನೆಸ್ ಟೂರ್ ಅಂತ ಸಿಂಗಾಪೋರ್ ಗೆ ಹೋಗಿ ಒಂದು ತಿಂಗಳಾಯಿತು. ಡ್ಯಾಡ್ ಯುಕೆಗೆ ಹೋಗಿ ಸಿಕ್ಸ್ ಮಂತ್ಸ್ ಆಯಿತು.”
“ಮತ್ತೆ ಮನೆಯಲ್ಲಿ ಯಾರ್ಯಾರು ಇದ್ದಾರೆ”
“ನಮ್ಮ ಅಡುಗೆ ರಂಗಣ್ಣ ಮತ್ತೆ 4-5 ಜನ ಕೆಲಸದವರು.” ಪಾಪ ಎನಿಸಿತು. ಶ್ರೀಮಂತರ ಮನೆಯಲ್ಲಿ ದುಡ್ಡು ದಂಡಿಯಾಗೇ ಇದ್ದರೂ ಪ್ರೀತಿಯ ಕೊರತೆ ಜಾಸ್ತಿ.
“ರಾತ್ರಿ ತುಂಬಾ ಹೊತ್ತಾಯಿತು. ಮಲಕ್ಕೋಪ್ಪ. ನಾಳೆ ಮಾತಾಡೋಣ ಅಂದೆ.
“ಮ್ಯಾಮ್ ಒಂದು ಹಾಡು ಹೇಳ್ತೀರಾ?” ಇದೆಂತಹ ಬೇಡಿಕೆ. ಸ್ವಲ್ಪ ಜಾಸ್ತಿ ಆಯಿತು ಅಂತ ಅನಿಸಿತು ನನಗೆ.
“ನಂಗೆ ಹಾಡು ಹಾಡೋಕೆ ಬರಲ್ಲಪ್ಪ”
“ಸುಳ್ಳು ಹೆಳ್ಬೇಡಿ. ನೀವು ಮಾತಾಡಿದ್ರೆ ಹಾಡಿದ ಹಾಗೇ ಇರುತ್ತೆ.” ನನ್ ಮಗಳು ಪಕ್ಕದ ರೂಮಿನಿಂದ ನಮ್ಮ ಸಂಭಾಷಣೆ ಕೇಳಿಸಿಕೊಂಡವಳು “ಅಮ್ಮ ಪ್ಲೀಜ್ ಹಾಡು ಮಾತ್ರ ಹಾಡ್ಬೇಡ ಈ ರಾತ್ರಿ. ನಂಗೆ ಬರೋ ನಿದ್ದೆನೂ ಬರಲ್ಲ” ಅಂದಳು. ನಾನೇನು ಅಷ್ಟು ಕೆಟ್ಟದಾಗಿ ಹಾಡಲ್ಲ. ನನ್ ವಾಯಿಸ್ ಸುಮಾರಾಗೇ ಇದೆ. ನನ್ ಮಗಳಿಗೆ ನೋಡಿ ಎಷ್ಟು ಕೊಬ್ಬು.
ಕೆ ಎಸ್ ನರಸಿಂಹಸ್ವಾಮಿಯ ಸುಲೋಚನ ಹಾಡಿರುವ ಅತ್ತಿತ್ತ ನೋಡದಿರು ಆಡಿಯೋ ವನ್ನು ಅಂಕುರ್ ಗೆ ಫಾರ್ವರ್ಡ್ ಮಾಡಿದೆ. ಐದು ನಿಮಿಷದ ಮೇಲೆ “ಮ್ಯಾಮ್ ನಾನು ಅಷ್ಟು ಚಿಕ್ಕ ಮಗುವಲ್ಲ. ಆದರೂ ಹಾಡು ಚೆನ್ನಾಗಿದೆ “ ಅಂತ ಸ್ಮೈಲ್ ಇಮೋಜಿಯೊಡನೆ ಮೆಸೇಜ್ ಬಂತು. ಗುಡ್ ನೈಟ್ ಹೇಳಿ ಮಲಕ್ಕೊಂಡೆ.
ಯಾಕೋ ಇತ್ತೀಚೆಗೆ ಅಂಕುರ್ ಮೇಲೆ ಒಂದು ತರದ ಪ್ರೀತಿ ಬೆಳೆಯೋಕೆ ಶುರುವಾಯಿತು. ಅದೊಂದು ತರ ಮಾತೃ ಭಾವನೆ ಅಂದರೂ ತಪ್ಪಾಗದು. ಆಗಾಗ ನನ್ನ ಹಳೆಯ ಡಿಪಿಯಲ್ಲಿದ್ದ ಫೋಟೋವನ್ನು ಸೇವ್ ಮಾಡಿಟ್ಟವ ಅದಕ್ಕೆ ಏನಾದರೂ ಕಾಮೆಂಟ್ಸ್ ಎಡಿಟ್ ಮಾಡಿ ನಂಗೇ ಕಳಿಸ್ತಾ ಇದ್ದ. ದಿನಕ್ಕೆ ಒಂದು ಹತ್ತು ಬಾರಿಯಾದ್ರೂ ‘ಲವ್ ಯು’ ಅಂತ ಮೆಸೇಜ್ ಬೇರೆ ಕಳಿಸ್ತಾ ಇದ್ದ. ನಾನು ನಂಗೆ ವಯಸ್ಸಾಗಿದೆ, ನಿನ್ನ ವಯಸ್ಸಿಗೆ ಹತ್ತಿರವಿರುವ ಮಗಳಿದ್ದಾಳೆ. ನೀನು ಈ ತರ ಬರೆಯೋದು ಮಾತಾಡೋದು ಸರಿಯಲ್ಲ ಎಂದು ಎಷ್ಟು ಹೇಳಿದ್ರೂ ಕೇಳದೆ ಮತ್ತೆ ಅವನ ಮಂಗ ಚೇಷ್ಟೆ ಮುಂದುವರಿಸಿದ್ದ.
ಇದ್ದಕ್ಕಿದ್ದಂತೆ ಒಂದು ದಿನ ರಾತ್ರಿ ಅಂಕುರ್ ಮೆಸೇಜ್ ನಲ್ಲಿ “ಮ್ಯಾಮ್ ನಿಮ್ಮ husky eyes ನೋಡ್ತಾ ಇದ್ದರೆ ನಂಗೆ ನಾನು ಕಳೆದೇ ಹೋಗಿ ಬಿಡ್ತೀನಿ ಅಂತ ಅನಿಸ್ತಿದೆ. Its similar to wine feel… so cute. Before I die I want to have a close look at your eyes. You know mam your beauty is virtually murdering me.”. ಕೃಷ್ಣಾ ಎಂತಹ ಶಬ್ದಗಳಪ್ಪಾ. Virtually murdering ಅಂತೇ. ಎಂತ ಸಾವು. ಈಗಿನ ಹುಡುಗ್ರಾ ಅವರ ಭಾಷೆನಾ ಭಗವಂತಾ !
“stupid.. ನೀನು ನಂಗೆ ಮಗನ ತರ ಇದ್ದೀಯಾ” ಅಂದೆ.
“ಸ್ಟುಪಿಡ್, ಇಡಿಯಟ್, ಪಾಗಲ್, ರಾಸ್ಕಲ್ ಅಂತ ಏನು ಬೇಕಾದ್ರೂ ಬೈಯಿರಿ. ಬಟ್ ಮಗ ಅಂತ ಮಾತ್ರ ಪ್ಲೀಜ್ ಹೇಳ್ಬೇಡಿ”
“ನಿನ್ ತಲೆ” ಅಂದೆ.
“ಮ್ಯಾಮ್ ನೀವು ಬೈಯ್ಯೋದು ಕೂಡಾ ಎಷ್ಟು ಕ್ಯೂಟ್ ಆಗಿ ಇರುತ್ತೆ ಗೊತ್ತಾ? ಯು ಆರ್ ಸೋ gorgeous” ಹೌದು ನಿಮ್ಮ ಕಾಲೇಜ್ ಡೇಸ್ ನಲ್ಲಿ ಎಷ್ಟು ಹುಡುಗರು ನಿಮ್ಮ ಹಿಂದೆ ಬಿದ್ದು ಸೂಯಿಸೈಡ್ ಮಾಡ್ಕೊಂಡಿದ್ದಾರೆ ಮ್ಯಾಮ್?.
“ನಾನು ವುಮೆನ್ಸ್ ಕಾಲೇಜಿನಲ್ಲಿ ಓದಿದ್ದು. ಅಂತ ಸೀನು ಏನೂ ಇಲ್ಲ” ಅಂತ ಒಂದು ಸುಳ್ಳು ಹೇಳಿದೆ. ಯಾಕಂದ್ರೆ ನಿಜವಾಗ್ಲೂ ಸುಮಾರು ಜನ ನನ್ ಹಿಂದೆ ಬಿದ್ದಿದ್ದರು. ನನ್ ಗಂಡ ಕೂಡಾ ಮದುವೆಗೆ ಮುಂಚೆ ಸುಮಾರು ವರ್ಷ ನನ್ ಹಿಂದೆ ಅಲೆದಿದ್ದ ಬಿಡಿ ಪಾಪ ಬಡಪಾಯಿ. ನನಗೆ ಬಂದಿರುವ ಲವ್ ಲೆಟರ್ಸ್ ಮತ್ತು ರೋಸ್ ಹೂವುಗಳ ಸಂಖ್ಯೆ ನನಗಿಂತ ಚೆನ್ನಾಗಿ ಅವನಿಗೇ ಗೊತ್ತು!
“ಮ್ಯಾಮ್ ನಾಳೆ ಶನಿವಾರ ನಿಮಗೆ ವೀಕ್ಲೀ ಆಫ್ ಅಲ್ವಾ?” ಅಂತ ಅಂಕುರ್ ಮೆಸೇಜ್.
”ಯಾಕೆ? ಏನಾಗ್ಬೇಕಿತ್ತು”” ಕೇಳಿದೆ.
“I want to have a date with you!” ಕೃಷ್ಣ ಕೃಷ್ಣಾ ಡೇಟಿಂಗ್ ಗೆ ಬೇರೆ ಕರಿತಾ ಇದ್ದಾನಲ್ಲಪ್ಪ. ಟಿವಿಯಲ್ಲಿ advertise ಬರುತ್ತಾ ಇದ್ದ ಕಾರಣ ನಾನು
ಜೋರಾಗಿ ಹೇಳಿದ್ದು ಅಪರೂಪಕ್ಕೆ ಎಂಬಂತೆ ನನ್ ಗಂಡನಿಗೆ ಕೇಳಿಸಿತು.
“ಏನೇ ಆಯಿತು?” ನನ್ ಮಗಳು ಬಗ್ಗಿ ನನ್ನ ಮೊಬೈಲ್ ನೋಡಿದವಳು “ಪಪ್ಪ ಅಮ್ಮನಿಗೆ ಒಂದು ಒಳ್ಳೇ ಆಫರ್ ಬಂದಿದೆ”
“ಏನು ಮಾರಾಯಿತಿ ಅಂತಹ ಒಳ್ಳೇ ಆಫರ್.”
“ಅಮ್ಮನಿಗೆ ಯಾರೋ ಡೇಟಿಂಗ್ ಗೆ ಕರಿತಾ ಇದ್ದಾರೆ. ನೀವಿದ್ದೀರಾ ವೇಸ್ಟ್. ಮೂರು ಹೊತ್ತು ಆಫೀಸ್, ಮನೆಯಲ್ಲಿದ್ರೆ ಡಿಸ್ಕವರೀ, ನ್ಯಾಷನಲ್ ಜಿಯೋಗ್ರಾಫಿ” ಅಂದಳು ನನ್ ಮಗಳು.
ಅದಕ್ಕೆ ನನ್ ಗಂಡಾ..”is it so?…enjoy.. have a great day!” ಅಂದ. ಇವನ ಉದಾಸೀನಕ್ಕೆ ನಾಲ್ಕು ತದಕಬೇಕು ಅನ್ನಿಸ್ತು. ಆದರೂ ಏನೂ ಮಾಡೋಕ್ಕಾಗಲ್ವೇ? ಪತಿಯೇ ಪರ ದೈವ!
ಈ ಹುಡುಗನಿಗೆ ಏನಾದ್ರೂ ಮಾಡ್ಬೇಕಲ್ವಾ ಅಂತ ಯೋಚಿಸಿ ಒಂದು ದಿನ ನಾನೇ ಫೋನ್ ಮಾಡಿದೆ. ಕೆಲಸದ ನಿಮಿತ್ತ ಬಿಟ್ರೆ ಆಫೀಸ್ ಮುಗಿದ ಮೇಲೆ ನಾನು ಫೋನ್ ಮಾಡುವುದೇ ಇಲ್ಲ. ಹುಡುಗ ಫುಲ್ ಖುಷಿ. “ಮ್ಯಾಮ್ ನೀವು ಫೋನ್ ಮಾಡಿದ್ದಾ? ಐ ಯಾಮ್ ಸೋ ಹ್ಯಾಪಿ, ನನ್ನ ಡೇಟಿಂಗ್ ಆಫರ್ ಆಕ್ಸೆಪ್ಟ್ ಮಾಡಿದ್ರಾ?” ಅಂತ ಕೇಳಿದ.
“ಹ್ಮ ಒಂಥರಾ ಹಾಗೇನೇ” ಅಂದೆ.
“ವ್ಹಾಟ್ ನಾನು ನಂಬೋಕೆ ಆಗಲ್ಲ. ನನ್ನಷ್ಟು ಲಕ್ಕೀ ಯಾರೂ ಇಲ್ಲ. ಮ್ಯಾಮ್ ಥ್ಯಾಂಕ್ಯು ಥ್ಯಾಂಕ್ಯು ಸೋ ಮಚ್. ಎಲ್ಲಿ, ಯಾವಾಗ ಬರ್ಲಿ” ಹುಡುಗ ಕುಣಿಯುತ್ತಿರುವಂತೆ ಭಾಸವಾಯಿತು.
“ಸಮಾಧಾನ. ನಾನು ಹೊರಗೆ ಎಲ್ಲೂ ಬರಲ್ಲ. ಈ ಸಂಡೆ ನೀನು ನಮ್ಮನೆಗೆ ಊಟಕ್ಕೆ ಬಾ”
“ವಾವ್ ಸೋ ನೈಸ್. ನಾನು ಬೆಳಿಗ್ಗೆ ಬ್ರೇಕ್ ಫಾಸ್ಟ್, ಲಂಚ್ ಎಲ್ಲಾ ನಿಮ್ಮನೇಲೇ ಮಾಡೋದು. ಆವತ್ತು ಒಂದು ದಿನ ನೀವು ನನ್ನತ್ರ ಮಾತಾಡುವಾಗ ಮಂಗಳೂರಿನವರು ಅಂದಿದ್ರಲ್ಲಾ. ನಂಗೆ ನಾಷ್ಟಕ್ಕೆ ನೀರು ದೋಸೆ ಕೆಂಪು ಚಟ್ನಿನೇ ಬೇಕು.” ಒಂದು ಚಿಕ್ಕ ಮಗು ಅಮ್ಮನತ್ರ ಗೋಗರೆಯುವ ಹಾಗಿತ್ತು ಅವನ ಮಾತು.
“ಆಯಿತಪ್ಪ ಮಾಡ್ತೀನಿ. ನಾಳೆ ಲೊಕೇಷನ್ ಕಳಿಸ್ತೀನಿ” ಅಂದೆ.
ಶನಿವಾರ ರಾತ್ರಿ ನೀರು ದೋಸೆಗೆ ಅಕ್ಕಿ ನೆನೆ ಹಾಕಿ ಅಂಕುರ್ ಗೆ ಮನೆಯ ಲೊಕೇಷನ್ ಷೇರ್ ಮಾಡಿದೆ. ಭಾನುವಾರ ಬೆಳಿಗ್ಗೆ ಎಂಟು ಗಂಟೆಗೆ ತನ್ನ ರೆಡ್ ಕಲರ್ ಬೆಂಜ್ ಕಾರು ಮನೆಯ ಮುಂದೆ ತಂದು ನಿಲ್ಲಿಸಿದ. ಡಿಪಿಯಲ್ಲಿ ನೋಡಿದ್ದಕ್ಕಿಂತ ಹುಡುಗ ಇನ್ನೂ ಮುದ್ದು ಮುದ್ದಾಗಿದೆ. ನನ್ನನ್ನು ನೋಡಿದ ಕೂಡಲೇ ಓಡಿಕೊಂಡು ಬಂದು ತಬ್ಬಿಕೊಂಡ. ನನಗೆ ಆತನನ್ನು ಮಗು ತರ ಮುದ್ದು ಮಾಡಬೇಕೆನಿಸಿತು. ಮನೆಯೊಳಗೆ ಕರೆದುಕೊಂಡು ಹೋಗಿ ನನ್ನ ಗಂಡ ಹಾಗೂ ಮಗಳನ್ನು ಪರಿಚಯ ಮಾಡಿದೆ. ಆಗ ಹುಡುಗನಿಗೆ ನಾನು ಅವನು ಯೋಚಿಸಿದಷ್ಟು ಚಿಕ್ಕ ವಯಸ್ಸಿನವಳು ಅಲ್ಲ ಎಂದು ಅರ್ಥವಾಯಿತು. ಮನೆಯೊಳಗೆಲ್ಲ ನನ್ನ ಹಿಂದೇನೇ ಸುತ್ತುತ್ತಿತ್ತು ಹುಡುಗ. “ಮ್ಯಾಮ್ ಆದರೂ ನಿಮ್ಗೆ ಇಷ್ಟು ದೊಡ್ಡ ಮಗಳಿದ್ದಾಳೆ ಅಂತ ಅನ್ಸುದೇ ಇಲ್ಲ” ಅಂದ. ಅದಕ್ಕೆ ನಾನು ಈಗಲಾದರೂ ಗೊತ್ತಾಯಿತಾ ನಾನು ಮೂವತ್ತು ವರ್ಷದವಳು ಅಲ್ಲಾ ಅಂತ ಹೇಳಿದ್ರೆ “ಸ್ಟಿಲ್ ನೀವು ನಲವತ್ತೈದು ವರ್ಷ ಅಂದರೆ ಯಾರೂ ಕೂಡಾ ನಂಬಲ್ಲ.” ಅಂದ.
ಬೆಳಿಗ್ಗಿನ ತಿಂಡಿ ಮಧ್ಯಾನ್ಹದ ಊಟ ಎಲ್ಲಾ ನಮ್ಮನೆಲೇ ನಡೆಯಿತು. ಅಂಕುರ್ ನನ್ನ ಗಂಡ, ಮಗಳ ಜೊತೆ ಇಡೀ ದಿನ ಖುಷಿ ಖುಷಿಯಾಗೇ ಕಳೆದ. ಮಧ್ಯಾಹ್ನ ಊಟ ಆದ ಮೇಲೆ ಕೇರಂ, ಸಾಯಂಕಾಲ ಎಲ್ಲಾರು ಸೇರಿ ಶಟಲ್ ಕಾಕ್ ಆಡಿದೆವು. ಆಮೇಲೆ ಮನೆಯ ಪಕ್ಕದ ಪಾರ್ಕ್ ಗೆ ಹೋಗಿ ಒಂದೆರಡು ಸುತ್ತು ಕೂಡಾ ಹೊಡೆದೆವು. ಅಂಕುರ್ ತುಂಬಾನೇ ಖುಷಿ ಆದ.
“ಮ್ಯಾಮ್ ನಂಗೆ ಇಂತಹ ಒಂದು ಫ್ಯಾಮಿಲಿ, ಅಪ್ಪ ಅಮ್ಮನ ಪ್ರೀತಿ ನೋಡಿನೇ ಗೊತ್ತಿಲ್ಲ. ನಿಮ್ಮ ಮಗಳು ಈಸ್ ಸೋ ಲಕ್ಕೀ. ಮ್ಯಾಮ್ ನಿಮಗೆ ಲವ್ ಲವ್ ಅಂತಾ ತುಂಬಾನೇ ಕಾಟ ಕೊಟ್ಟೆ. ಐ ಯಾಮ್ ಸಾರಿ ಮ್ಯಾಮ್. ನಂಗೆ ನೀವು, ನಿಮ್ಮ ಫ್ಯಾಮಿಲಿ ತುಂಬಾನೇ ಇಷ್ಟ ಆಯಿತು. ನಾನು ಆಗಾಗ ನಿಮ್ಮ ಮನೆಗೆ ಬರಬಹುದಾ?” ಎಂದು ಕೇಳಿದಾಗ ನಂಗೆ ಯಾಕೋ ಹೊಟ್ಟೆ ಚುರ್ ಅನ್ನಿಸಿತು.
“ನಿಂಗೆ ಯಾವಾಗ ಬೇಕಾದ್ರೂ ನಮ್ಮನೆಗೆ ಬರಬಹುದು. ನೀನು ಪರ್ಮಿಷನ್ ಕೇಳೋದೇ ಬೇಡ. ನಿಂಗೆ ಏನು ತಿನ್ನಬೇಕು ಅನಿಸಿದ್ರೂ ನನಗೆ ಫೋನ್ ಮಾಡಿ ಹೇಳು. ಮಾಡಿ ಕೊಡ್ತೀನಿ. ಸರೀನಾ?” ಅಂದೆ. ಸಾಯಂಕಾಲ ಟೀ ಜೊತೆಗೆ ನಾನು ಮಾಡಿದ್ದ ಈರುಳ್ಳಿ ಪಕೋಡ ತಿಂದು ಹುಡುಗ ಅವನ ಮನೆಗೆ ಹೋದ.
ಅಬ್ಬಾ ಈ ಡಿಪಿಯ ಅವಾಂತರ ನೆನೆಸಿಕೊಂಡಾಗ ನನಗೆ ನಗು ಬಂತು. ಒಂದು ತಿಂಗಳು ತಲೆಗೆ ಮೇಹೆಂದಿ ಹಾಕದೇ ಎರಡು ಮೂರು ಬಿಳಿ ಕೂದಲು ಕಾಣುವ ಹಾಗೆ ಮಾಡಿ ಹಾಗೂ ಕನ್ನಡಕ ಒಂದನ್ನು ಹಾಕಿಕೊಂಡು ನನ್ನ ಗಂಡನತ್ರ ಒಂದು ಫೋಟೋ ತೆಗೆಸಿಕೊಂಡು ವ್ಹಾಟ್ಸಪ್ಪ್ ಡಿಪಿ ಮತ್ತು ಫೇಸ್ ಬುಕ್ ಪ್ರೊಫೈಲ್ ಪಿಕ್ ಅಪ್ ಲೋಡ್ ಮಾಡಿದೆ. ಮರುದಿನ ನನ್ನ ಅಕ್ಕನ ಮಗಳು “ಚಿಕ್ಕಿ ಅದೇನು ಅಜ್ಜಿ ತರ ಇರುವ ಪಿಕ್ ಹಾಕಿದ್ದೀಯಾ? ಆ ಬಿಳಿ ಕೂದಲು, ಸ್ಪೆಕ್ಸ್... ಒಂದು ಚೂರೂ ಚೆನ್ನಾಗಿಲ್ಲ. ಚೇಂಜ್ ಮಾಡು” ಅಂದಳು.
ಅಬ್ಬಾ ಸದ್ಯ ಅಜ್ಜಿ ತರ ಕಾಣುತ್ತಿದೆ ಅಂದಳಲ್ವಾ? ಅಷ್ಟು ಸಾಕು. ಮಗಳಿಗೆ ನನ್ನ ಡಿಪಿ ಚೇಂಜ್ ಮಾಡ್ಬೇದ ಅಂತ ಹೇಳಿ ಆಮೇಲೆ ನಾನು ಕೂಡಾ ಈ ಡಿಪಿ ಪಿಕ್ ಚೇಂಜ್ ಮಾಡುವ ಗೊಡವೆಗೇ ಹೋಗ್ಲಿಲ್ಲ! ಫೇಸ್ ಬುಕ್ ನಲ್ಲಂತೂ ದಿನಕ್ಕೆ ಬರುವ ಹತ್ತು – ಹದಿನೈದು ಫ್ರೆಂಡ್ಸ್ ರಿಕ್ವೆಸ್ಟ್, ಯು ಆರ್ ಸೋ ಕ್ಯೂಟ್, ಗಾರ್ಜಿಯಸ್, ಲವ್ ಯು ಇತ್ಯಾದಿ ಇತ್ಯಾದಿ ಸಂದೇಶಗಳು ಬರುವುದು ನಿಂತೇ ಹೋಯಿತು!!