ದಕ್ಷಿಣ ಕನ್ನಡ ಗೌಡ ಜನಾಂಗದ ಆಚರಣೆಗಳು

ದಕ್ಷಿಣ ಕನ್ನಡ ಗೌಡ ಜನಾಂಗದ ಆಚರಣೆಗಳು

Mar 03, 2025

ಲೇಖಕರು : ಉದಯಗೌರಿ


ಉಪಜಾತಿಗಳಿಲ್ಲದ ಒಂದೇ ಒಂದು ಜನಾಂಗ ಎಂದರೆ ಅದು ದಕ್ಷಿಣ ಕನ್ನಡದ ಗೌಡ ಜನಾಂಗ. ಹತ್ತು ಕುಟುಂಬ ಹದಿನೆಂಟು ಗೋತ್ರ. ಎಂಬ ಸಾಂಪ್ರದಾಯಿಕ ನುಡಿಯನ್ವಯ ಬದುಕು ನಡೆಸುವವರು ಈ ದಕ್ಷಿಣ ಕನ್ನಡದ ಗೌಡ ಜನಾಂಗದವರು. ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ, ಪುತ್ತೂರು, ಬಂಟ್ವಾಳ, ಬೆಳ್ತಂಗಡಿ, ಸುಬ್ರಹ್ಮಣ್ಯ ಪ್ರದೇಶದಲ್ಲಿ ಹತ್ತು ಕುಟುಂಬದ ಹದಿನೆಂಟು ಗೋತ್ರ ಎಂಬ ಚೌಕಟ್ಟಿನೊಳಗೆ ಒಂದು ಅಂದಾಜಿನ ಪ್ರಕಾರ ಆರರಿಂದ ಏಳು ಲಕ್ಷಕ್ಕೂ ಅಧಿಕ ಗೌಡ ಜನಾಂಗದವರು ವಾಸವಾಗಿದ್ದಾರೆ.


ದಕ್ಷಿಣ ಕನ್ನಡದ ಗೌಡರ ಆಚಾರ, ವಿಚಾರ, ಆಹಾರ ಪದ್ಧತಿ ವೈಶಿಷ್ಟ್ಯಪೂರ್ಣವಾಗಿದೆ. ಮಾಂಸಾಹಾರಿಗಳಾಗಿರುವ ಗೌಡ ಜನರು ನಾಗಾರಾಧನೆ ಮತ್ತು ಭೂತಾರಾಧನೆಯನ್ನು ಮಾಡುತ್ತಾ ವ್ಯವಸ್ಥಿತ ಬದುಕು ನಡೆಸುತ್ತಿದಾರೆ. ವೆಂಕಟರಮಣ ಸ್ವಾಮಿ ಈ ಗೌಡ ಜನಾಂಗದವರ ಕುಲದೇವತೆಯಾದರೂ ಮದುವೆ ಸಂದರ್ಭದಲ್ಲಿ ಮದುವೆ ಕಾಣಿಕೆಯನ್ನು ಸುಬ್ಬಮ್ಮದೇವಿ (ಶಾರದಾದೇವಿ)ಗೆ ಸಲ್ಲಿಸುವ ಪರಿಪಾಠವಿದೆ. ಈಗೀಗ ಅದು ಕಡಿಮೆಯಾಗಿದೆ ಎಂಬುದು ಬೇರೆ ವಿಚಾರ. ಅದು ಏನೇ ಇರಲಿ ದಕ್ಷಿಣ ಕನ್ನಡದ ಗೌಡ ಜನಾಂಗದವರ ಆಚರಣೆಗಳು ವೈಶಿಷ್ಟ್ಯ ಪೂರ್ಣವಾದುದು. ದಕ್ಷಿಣ ಕನ್ನಡದ ಇತರ ಜನಾಂಗದವರಿಗಿಂತ ತುಸು ಭಿನ್ನವೇ ಎನ್ನಬಹುದಾದ ಆಚರಣೆಗಳು ಗೌಡ ಸಮುದಾಯದ ಹೆಗ್ಗುರುತಾಗಿದೆ. ದಕ್ಷಿಣ ಕನ್ನಡ ಗೌಡರ ಮನೆಗಳಲ್ಲಿ ಆಚರಿಸುವ ಹಬ್ಬ ಹರಿದಿನಗಳ ಬಗ್ಗೆ ಒಂದು ಪಕ್ಷಿನೋಟವನ್ನು ಹೀಗೆ ಬೀರಬಹುದು. ಹೊಸವರ್ಷ ಸೌರಮಾನ ಯುಗಾದಿ ಪ್ರತಿ ತಿಂಗಳಿಗಳೊಂದಾವರ್ತಿ ಸಂಕ್ರಮಣ ಕಾಲವಿದ್ದರೂ ದಕ್ಷಿಣ ಕನ್ನಡಿಗರು ಮೇಷ ಸಂಕ್ರಮಣ ಬಿಸು (ವಿಷು ಸಂಕ್ರಾಂತಿ) ಮತ್ತು ತುಲಾ ಸಂಕ್ರಾಂತಿಯನ್ನು ವಿಶೇಷವಾಗಿ ಆಚರಿಸುವುದು ಪದ್ಧತಿ. ಅದರಲ್ಲೂ ದಕ್ಷಿಣ ಕನ್ನಡದ ಗೌಡ ಜನಾಂಗಿಯರಿಗೆ ಹೊಸವರ್ಷ ಆರಂಭವಾಗುವುದೇ ಈ ವಿಷು ಸಂಕ್ರಾಂತಿಯ ದಿನದಿಂದ. ಪಗ್ಗು ತಿಂಗಳ 1ನೇ ದಿನದಿಂದ ತುಳುವರಿಗೆ ಹೊಸವರ್ಷ ಆರಂಭ. ಅಂದರೆ ಏಪ್ರಿಲ್‌ ತಿಂಗಳ 14ನೇ ತಾರೀಖಿನಂದು ಸೌರಮಾನ ಯುಗಾದಿಯನ್ನು ಆಚರಿಸುತ್ತಾರೆ. ಸುಗ್ಗಿಯ ಸಂಭ್ರಮ ಬೆಳೆದ ಬೆಳೆ ಕೈಯಲ್ಲಿರುವಾಗಿನ ಸಂಭ್ರಮ ವಸಂತ ಯತುವಿನ ಆಗಮನದ ಕಾಲ ಶಿಶಿರದಲ್ಲಿ ಎಲೆಯುದುರಿಸಿಕೊಂಡಿದ್ದ ಮರಗಳು ಚಿಗುರಿ ನಳನಳಿಸುವ ಸಂಭ್ರಮದ ಕಾಲ. ಅಂತಹ ಸುಕಾಲದಲ್ಲಿ ಜನರು ಆಚರಿಸುವ ಹಬ್ಬವೇ ವಿಷು ಸಂಕ್ರಾಂತಿ. (ಬಿಸು ಪರ್ಬ) ಮುಂದಿನ ವ್ಯವಸಾಯಕ್ಕೆ ಪೀಠಿಕೆಯಾಗಿ ಎತ್ತುಗಳನ್ನು ಗದ್ದೆಗಿಳಿಸಿ ನೊಗನೇಗಿಲು ಕಟ್ಟಿ ಗದ್ದೆ ಉಳುಮೆ ಆರಂಭಿಸಲಾಗುತ್ತದೆ ಮತ್ತು ಅದರ ಕುರುಹಾಗಿ ನೆಕ್ಕಿ ಗಿಡವನ್ನು ಗದ್ದೆಯಲ್ಲಿ ನೆಡುವ ಪದ್ಧತಿ ಇದೆ.ಬಿಸು ಪರ್ಬದ ಪ್ರಮುಖ ಆಚರಣೆ ಎಂದರೆ ಬಿಸು ಕಣಿ ಇಡುವ ಶಾಸ್ತ್ರ. ಬೆಳೆದ ಕಾಯಿಪಲ್ಲೆ (ತರಕಾರಿ)ಗಳನ್ನು ನಡುಮನೆಯಲ್ಲಿ (ದೇವರ ಮನೆ) ಎಡೆ ಇಟ್ಟು ದೀಪ ಹಚ್ಚಿ ಭಕ್ತಿಯಿಂದ ದೇವರನ್ನು ಪ್ರಾರ್ಥಿಸುತ್ತಾರೆ. ಹೊಸ ಬಟ್ಟೆಗಳನ್ನು ಉಡುಗೊರೆಯಾಗಿ ಪಡೆಯುವುದು ವಾಡಿಕೆ. ಬಿಸು ಪರ್ಬದ ಮತ್ತೊಂದು ವೈಶಿಷ್ಟ್ಯವೆಂದರೆ ಹಿರಿ ಮನೆಗೆ ಗೇಣಿ ಒಕ್ಕಲು ಮನೆಯವರು ತಾವು ಬೆಳೆದ ತರಕಾರಿಯನ್ನೋ ಅಥವಾ ತಾವು ತಯಾರಿಸಿದ ಚಾಪೆ ಮಡಿಕೆ ಕುಡಿಕೆ ಇತ್ಯಾದಿಗಳನ್ನೇ ತಂದು ಕೊಟ್ಟು ಹಿರಿಯ ಮನೆಯ ಹಿರಿಯರಿಂದ ಉಡುಗೊರೆ, ದಕ್ಷಿಣೆಗಳನ್ನು ಪಡೆಯುವ ವಾಡಿಕೆ ಇದೆ. ಈಗ ಬಿಸು ಕಣಿ ಇಟ್ಟು ಆಚರಿಸುವವರ ಸಂಖ್ಯೆಯು ಕಡಿಮೆ ಆಗಿದೆ. ದಣಿಗಳೆಂಬ ಗೌರವದಿಂದ ಬರುವವರ ಸಂಖ್ಯೆಯು ಕಡಿಮೆಯಾಗಿದೆ. ಹೀಗೆ ಬಂದವರಿಗೆ ದಣಿಗಳು ಹೊಸ ಬಟ್ಟೆ ಕೊಟ್ಟು, ಹೊಟ್ಟೆ ತುಂಬ ಊಟ ಕೊಟ್ಟು ಅವರ ಮನೆಮಂದಿಗೂ ಊಟ ಬಟ್ಟೆ ಕೊಟ್ಟು ಕಳುಹಿಸುತ್ತಿದ್ದರು.


ಗೌಡರ ಮನೆಗಳಲ್ಲಿ ಆಚರಿಸುವ ಇನ್ನೊಂದು ವಿಶಿಷ್ಟವಾದ ಆಚರಣೆಯೆಂದರೆ ತುಲಾ ಸಂಕ್ರಾಂತಿ. ಕಾವೇರಿ ಸಂಕ್ರಾಂತಿ ತಲಕಾವೇರಿಯಲ್ಲಿ ತೀರ್ಥ ಉದ್ಭವವಾಗುವ ಸುದಿನ. ಆ ಆಚರಣೆಗೂ ಒಂದು ಕಾರಣವಿದೆ. ದಕ್ಷಿಣ ಕನ್ನಡದ ಗೌಡ ಜನಾಂಗಿಯರು ತಮ್ಮ ಮನೆಯಲ್ಲಿ ಸಾವಾದರೆ ಆ ಆತ್ಮಕ್ಕೆ ತರ್ಪಣವನ್ನು ಬಿಡುವುದು ಕಾವೇರಿಯಲ್ಲಿ (ಭಾಗಮಂಡಲದ ತ್ರಿವೇಣಿ ಸಂಗಮದಲ್ಲಿ) ಆ ಆತ್ಮಗಳು ಅಲ್ಲೇ ನೆಲೆಯೂರಿರುತ್ತವೆ. ವರ್ಷಕ್ಕೆ ಒಂದಾವರ್ತಿ ತಲಕಾವೇರಿಯಲ್ಲಿ ತೀರ್ಥ ಉದ್ಭವವಾದ ಮೇಲೆ ತೀರ್ಥ ಸ್ವೀಕರಿಸಿ ಆತ್ಮಗಳು ತಮ್ಮ ಮನೆಗಳಿಗೆ ಹೋಗಿ ಬರುತ್ತವೆ ಎಂಬ ನಂಬಿಕೆ ಜನರಲ್ಲಿ. ಹಾಗಾಗಿ ಆ ದಿನ ಮನೆಗಳಲ್ಲಿ ಎಡೆ ಇಕ್ಕುವ ಪದ್ಧತಿ ಇದೆ. ಕಾವೇರಿ ಸಂಕ್ರಾಂತಿಗೆ ಮನೆಯ ಹೊಸ್ತಿಲಿಗೆ ಅಕ್ಕಿ, ಭತ್ತದ ರಾಶಿಗೆ ಚೂರಿ ಮುಳ್ಳು ಹಾಗೂ ಬಿಳಿಕಲ್ಲನ್ನು ಇಡುವ ಕ್ರಮವಿದೆ.
ಕೆಡ್ಡಾಸ: ದಕ್ಷಿಣ ಕನ್ನಡದ ಗೌಡ ಜನಾಂಗದವರು ಜನವರಿ ಅಥವಾ ಫೆಬ್ರವರಿ ತಿಂಗಳಲ್ಲಿ (ತುಳುವಿನ ಪೊಣ್ಣಿ ತಿಂಗಳು 28, 29, 30) ಆಚರಿಸುವ ವೈಶಿಷ್ಟ್ಯವಾದ ಹಬ್ಬ ಕೆಡ್ಡಾಸ. ಮೂರು ದಿನಗಳ ಆಚರಣೆ ಇದು. ಅದು ಭೂದೇವಿಯು ರಜಸ್ವಲೆ (ಮುಟ್ಟು) ಆಗುವ ದಿನಗಳು ಎಂಬ ನಂಬಿಕೆ. ಮೂರು ದಿನ ಭೂದೇವಿಗೆ ಕಷ್ಟಕೊಡುವಂತಿಲ್ಲ. ಮರ ಕಡಿಯುವುದು, ಬಾವಿ ತೋಡುವುದು ಇರಲಿ ಸೊಪ್ಪು ಸಹ ಕಡಿಯುವಂತಿಲ್ಲ. ಆ ಮೂರು ದಿನ ಮನೆಯಲ್ಲಿ ಶುದ್ಧ ಸಸ್ಯಾಹಾರಿ ಅಡುಗೆ ಆಗಬೇಕು. ಬೆಳಗಿನ ಉಪಹಾರಕ್ಕೆ ನನ್ನಿಯರಿ ಎಂಬ ವಿಶಿಷ್ಟವಾದ ತಿನಿಸು ಮಾಡುತ್ತಾರೆ. (ಕೆಂಪಕ್ಕಿಯನ್ನು ಕೆಂಪಗೆ ಹುರಿದು ಸ್ವಲ್ಪ ಮೆಂತ್ಯೆ, ಸ್ವಲ್ಪ ಧನಿಯ ಹಾಕಿ ಪುಡಿಮಾಡಿ ಬೆಲ್ಲ, ತೆಂಗಿನ ಕಾಯಿ ಹುರಿಯಕ್ಕಿ (ಕಡ್ಲೆಪುರಿ) ಹಾಕಿ ಬೆರೆಸುತ್ತಾರೆ. ಅದನ್ನು ದೇವರಿಗೆ ಎಡೆ ಇಟ್ಟು ತುಳಸಿ ಕಟ್ಟೆಯ ಬಳಿ ಸಾರಿಸಿ ತುದಿ ಬಾಲೆಳೆಯಲ್ಲಿ ಎಡೆ ಇಟ್ಟು ಭೂದೇವಿಗೆ ಸಮರ್ಪಿಸುವ ಪದ್ಧತಿ. ಮಧ್ಯಾಹ್ನದ ಊಟಕ್ಕೆ ಬದನೆಕಾಯಿ, ನುಗ್ಗೆಕಾಯಿ ಬೆರೆಸಿದ ಕೂಟು ಮಾಡುತ್ತಾರೆ. ಮೂರನೇ ದಿನ ಭೂದೇವಿಯನ್ನು ಸ್ನಾನಕ್ಕೆ ಕಳುಹಿಸುವ ಪದ್ಧತಿ. ತುಳಸಿ ಕಟ್ಟೆಯಲ್ಲಿ, ಸೆಗಣಿ ಸಾರಿಸಿ ಭೂಮಿಗೆ ಮೂರು ಸಲ ಎಣ್ಣೆ ಹಾಕುತ್ತಾರೆ.


ಅಮಾವಾಸ್ಯೆಯ ಆಚರಣೆ: ಸತ್ತ ಹಿರಿಯರ ಆತ್ಮಗಳಿಗೆ ಎಡೆ ಇಡುವ ಪದ್ಧತಿ, ವಿಶೇಷವಾಗಿ ಅಡುಗೆಗೆ ಮೀನುಸಾರು ಮಾಡುವುದು ವಾಡಿಕೆ. ಅಡುಗೆ ಮನೆ ಅಟ್ಟ (ದೆಂಗ)ದಲ್ಲಿ ಹಾಗೇ ದನದ ಕೊಟ್ಟಗೆ ಕಾಯುವನೆಂಬ ನಂಬಿಕೆಯ ಅಂಗರ ಕಲ್ಕುಡನಿಗೆ ಎಡೆ ಇಡಲಾಗುತ್ತದೆ. ಅಂಗರ ಕಲ್ಕುಡನಿಗೆ ಪ್ರತಿ ಮಂಗಳವಾರ ದನದ ಕೊಟ್ಟಿಗೆಯ ಮುಂದೆ ಸ್ಥಾಪಿಸಲಾಗಿರುವ ಕಲ್ಲಿನಲ್ಲಿ ಅನ್ನ ಮತ್ತು ಮೊಸರು ಇಡುವ ಪದ್ಧತಿಯು ತುಳುನಾಡಿನ ಗೌಡ ಜನಾಂಗಿಯರಲ್ಲಿ ಇದೆ.
ಬೇಷ ಪತ್ತನಾಜೆ: ತುಳುವರು ಬೇಷ ತಿಂಗಳು (ತುಳು ತಿಂಗಳು) 10ನೇ ದಿನದಂದು (ಮೇ, ತಿಂಗಳು) ತಾವು ಆರಾಧಿಸುತ್ತಾ ಬಂದಿರುವ ದೈವಗಳಿಗೆ ಎಡೆ ಇಟ್ಟು ಪೂಜಿಸುವ ಕ್ರಮವಿದೆ. ಸಾಮಾನ್ಯವಾಗಿ ತುಳುನಾಡಿನಲ್ಲಿ ದೈವಾರಾಧನೆ (ಭೂತಾರಾಧನೆ) ಪದ್ಧತಿ ಇದೆ. ದೈವಗಳಿಗೆ ಕೋಳಿ, ಹಂದಿ ಬಲಿ ಕೊಡುವ ಪದ್ಧತಿ ಹಿಂದಿನಿಂದಲೂ ಆಚರಣೆಯಲ್ಲಿದೆ. ಬೇಷ ಪತ್ತನಾಜೆಯ ದಿನ ದೈವಗಳಿಗೆ ಕೋಳಿ, ಹಂದಿಗಳನ್ನು ಬಲಿಕೊಟ್ಟು ಬತ್ತದ ಅರಳು, ಎಳನೀರಿನ ಎಡೆ ಇಟ್ಟು ಪೂಜಿಸುವ ಪದ್ಧತಿ ಈಗಲೂ ದಕ್ಷಿಣ ಕನ್ನಡದ ಗೌಡ ಮನೆಗಳಲ್ಲಿ ನಡೆದುಕೊಂಡು ಬಂದಿದೆ.
ಆಟಿ ಅಮಾವಾಸ್ಯೆ: ಆಷಾಢ ತಿಂಗಳಲ್ಲಿ ಬರುವ ಆಟಿ ಅಮಾವಾಸ್ಯೆಯ ಆಚರಣೆ ದಕ್ಷಿಣ ಕನ್ನಡದ ಗೌಡರಲ್ಲಿ ವಿಶಿಷ್ಟವಾಗಿದೆ. ಆಷಾಢದ ಅಮಾವಾಸ್ಯೆಯ ದಿನ ಪಾಳೆ ಹಾಲೆ ಮರದ ತೊಗಟೆಯಿಂದ ಅನ್ನ ಮಾಡಿ ಬೆಳಿಗ್ಗೆ ಮನೆ ಮಂದಿಯೆಲ್ಲ ಸೇವಿಸುತ್ತಾರೆ. ಆಷಾಢದಲ್ಲಿ ಆ ಮರದಲ್ಲಿ ವಿಶಿಷ್ಟವಾದ ಔಷಧಿಯ ಗುಣ ಶೇಖರವಾಗುತ್ತದೆ ಎಂಬ ನಂಬಿಕೆ ತುಳುವರದ್ದು. ಆಟಿ ತಿಂಗಳಲ್ಲಿ ಮರ ಕೆಸುವಿನ ಪತ್ರೋಡೆಯನ್ನು ಮೂರು ಸಲವಾದರೂ ಮಾಡಿ ತಿನ್ನಬೇಕು ಎಂಬ ನಂಬಿಕೆ ಇದೆ. ಹೊಟ್ಟೆಯಲ್ಲಿರುವ ಕಲುಷಿತವನ್ನು ಹೋಗಿಸುವ ಶಕ್ತಿ ಕೆಸುವಿಗೆ ಇದೆ. ಮರ ಕೆಸುವಿನ ಪತ್ರೊಡೆ ಮಾಡಿದರೆ ಶ್ರೇಷ್ಠ
ಮನೆ ತುಂಬಿಸುವುದು (ಇಲ್ಲ್‌ ದಿಂಜಾವುನ): ಬೆಳೆದ ಧಾನ್ಯ ಲಕ್ಷ್ಮಿಯನ್ನು ಗೌರವದಿಂದ ಭಕ್ತಿ ಶ್ರದ್ಧೆಯಿಂದ ಮನೆಗೆ ಬರಮಾಡಿಕೊಳ್ಳುವ ಪದ್ಧತಿ ತುಳು ಗೌಡರಲ್ಲಿದೆ. ಇದನ್ನು ಮನೆ ತುಂಬಿಸುವುದು(ಇಲ್ಲ್‌ ದಿಂಜಾವುನ) ಎಂದು ಕರೆಯುತ್ತಾರೆ. ಧಾನ್ಯಲಕ್ಷ್ಮಿಯನ್ನು ಮನೆ ತುಂಬಿಸಿ ಕೊಳ್ಳಬೇಕಾದರೆ ಮನೆಯನ್ನು ಶುಚಿಗೊಳಿಸಬೇಕು. ವಾರದಿಂದ ಆ ಕೆಲಸ ಭರದಿಂದ ನಡೆದಿರುತ್ತದೆ. ಅಟ್ಟ, ಮಟ್ಟ ಎಲ್ಲವನ್ನು ಗುಡಿಸಿ ಒರೆಸಿ ಶುಚಿಯಾಗಿಸುತ್ತಾರೆ. ಗಂಡಸರಿಗೆ ಮನೆ ತುಂಬಿಸಲು ಬೇಕಾದ ಆಲದ ಮರದ ಎಲೆ, ಅರಳಿ ಮರದ ಎಲೆ, ಅತ್ತಿ ಎಲೆ, ಬಿದಿರೆಲೆ, ದಾರ ಮೊದಲಾದವುಗಳನ್ನು ಸಂಗ್ರಹಿಸುವ ಕೆಲಸ ಎಲ್ಲವನ್ನು ಹಿಂದಿನ ದಿನವೇ ಶೇಖರಿಸಿ ಮನೆಯ ಹೊರಗೆ ಇಟ್ಟಿರುತ್ತಾರೆ. ಮರುದಿನ ಎದ್ದು ಮನೆಯವರೆಲ್ಲ ಶುರ್ಜಿಭೂತರಾಗಿ ಕದಿರು ತರಲು ಹೋಗುತ್ತಾರೆ. ಕದಿರು ತರಲು ಹೊರಟು ನಿಂತವರು ಮನೆಯಲ್ಲಿ ನಿಂತು “ಕದಿರು ತರಲು ಹೋಗ್ತಾ ಇದ್ದೀವಿ” ಎಂದು ಕೂಗಿ ಹೇಳಿದಾಗ “ಸ್ವಾಮಿ ಅಪ್ಪಣೆಯಂತೆಯೇ ಆಗಲಿ (ಸ್ವಾಮಿ ಅಪ್ಪಣೆ)” ಎಂದು ಮನೆಯವರು ಹೇಳುತ್ತಾರೆ. ಎಲ್ಲರೂ ಭೂದೇವಿಗೆ ನಮಸ್ಕರಿಸಿ ಕದಿರು ಕೀಳಲು ಬತ್ತದ ಗದ್ದೆಗೆ ಇಳಿಯುತ್ತಾ ಓ . ಹೊಳಿ ಹೊಳಿ ಪೊಳಿ' ಎಂದು ಕೂಗುತ್ತಾ ಕದಿರು ಕೀಳುತ್ತಾರೆ. 'ಪೊಳಿ ಎಂದರೆ ಸಿರಿ ಎ೦ದರ್ಥ. ಸಿರಿ ತುಂಬಲಿ ಎ೦ಬ ಅರ್ಥದಲ್ಲಿ ಹಾಗೆ ಕೂಗುತ್ತಾರೆ. ಕಿತ್ತ ಕದಿರನ್ನು ಹಿಂದಿನ ದಿನವೇ ಶೇಖರಿಸಿಟ್ಟ ಸುವಸ್ತುಗಳ ಜೊತೆ ಹೊಳಿ ಪೊಳಿ ಪೊಳಿ ಎಂದು ಕೂಗುತ್ತಾ ತುಳಸಿ ಕಟ್ಟೆಯ ಬಳಿ ತರುತ್ತಾರೆ. ತುಳಸಿ ಕಟ್ಟೆಯನ್ನು ಶುಚಿಗೊಳಿಸಿ ಸುತ್ತಲೂ ಸೆಗಣಿ ಸಾರಿಸಿ ಎರಡು ಮಣೆಯನ್ನುಹಾಕಿ ಮೊದಲೇ ಮನೆಯೊಡತಿ ಅಣಿಗೊಳಿಸಿರುತ್ತಾರೆ. ತುಳಸೀ ಕಟ್ಟೆಯಿಂದ ಮತ್ತೆ ಅವೆಲ್ಲವನ್ನು ಎತ್ತಿಕೊಂಡು ಏರುದ್ವನಿಯಲ್ಲಿ ಪೊಳಿ ಪೊಳಿ ಪೊಳಿ ಎಂದು ಕೂಗುತ್ತಾ ಮನೆಯ ಒಳಗೆ ಪ್ರವೇಶಿಸಿ ಅಲ್ಲಿಟ್ಟಿದ್ದ ಮಣೆಯ ಮೇಲಿಟ್ಟು ಅಡ್ಡ ಬೀಳುತ್ತಾರೆ. ಕಿರಿಯರು ಹಿರಿಯರ ಆಶೀರ್ವಾದ ತೆಗೆದುಕೊಳ್ಳುವುದು ಪದ್ಧತಿ. ದೀಪಕ್ಕೆ ಅಕ್ಕಿಹಾಕಿ ಕೈ ಮುಗಿದು ಹಣೆಗೆ ಗಂಧದ ತಿಲಕವಿಟ್ಟುಕೊಳ್ಳುವುದು ವಾಡಿಕೆ.ಆನಂತರ ಎಲ್ಲಾ ಸುವಸ್ತುಗಳನ್ನು ಒ೦ದು ಅರಳಿ ಎಲೆ, ಒ೦ದು ಆಲದೆಲೆ, ಒಂದು ಅತ್ತಿ ಎಲೆ, ಚಿಗುರು ಬಿದಿರ ಎಲೆಗಳ ಜೊತೆ ಮೂರು ಇಲ್ಲವೇ ಐದು ಕದಿರು ಇಟ್ಟು ದಾರದಲ್ಲಿ ಕಟ್ಟಲಾಗುತ್ತದೆ. ಹೀಗೆ ಹತ್ತು ಹದಿನೈದು ಕಟ್ಟುಗಳನ್ನು ಕಟ್ಟಿ ನೊಗನೇಗಿಲು, ಭತ್ತದ ಕಣಜ, ಬೀರು, ಹೊಸಿಲಿನ ಮೇಲ್ಗಡೆ ಬಾಗಿಲಿಗೆ, ತೊಟ್ಟಲು, ಕೊಟ್ಟಿಗೆ, ಅಳತೆ ಸಾಧನೆಗಳಿಗೆ ಹೀಗೆ ಎಲ್ಲಾ ಕಡೆ ಕಟ್ಟಲಾಗುತ್ತದೆ.ಮನೆಯಲ್ಲಿ ಸಿಹಿಯಡುಗೆ ಮಾಡಲಾಗುತ್ತದೆ. ಒಕ್ಕಲು ಮನೆಯವರು ಧಣಿಗಳ ಮನೆಯಿಂದ ಕದಿರು ತೆಗೆದುಕೊ೦ಡು ಹೋಗಿ ತಮ್ಮ ತಮ್ಮ ಮನೆಗಳಲ್ಲಿ ಕಟ್ಟಿಕೊಳ್ಳುತ್ತಾರೆ.
ಹೊಸದೂಟ (ಪುದ್ದಾರ್‌): ಹಿ೦ದೆ ಸರ್ವಶ್ರೇಷ್ಠ ಆಚರಣೆಯಂತಿದ್ದು ಈಗ ಕಾಲನ ತುಳಿತಕ್ಕೆ ಸಿಲುಕಿ ನಶಿಸಿ ಹೋಗಿರುವ ತುಳುನಾಡ ಗೌಡ ಜನಾಂಗದವರು ಸಂಭ್ರಮದಿಂದ ಆಚರಿಸುತ್ತಿದ್ದ ಆಚರಣೆ ಈ ಹೊಸದೂಟ ಅಥವಾ ಪುದ್ವಾರ್‌. ಹೊಸದೂಟ (ಪುದ್ವಾರ್‌) ಅ೦ದರೆ ಊರಿಗೆಲ್ಲ ಸಂಭ್ರಮ. ಬೆಳಗಿನಿಂದಲೇ ಅದರ ತಯಾರಿ ನಡೆಯುತ್ತದೆ. ಹೊಸ ಊಟ ಎಂದರೆ ಸುಗ್ಗಿ ಬೆಳೆಯ ಅಕ್ಕಿಯಿಂದ ತಯಾರಿಸುವ ಪ್ರಥಮ ಊಟ. ದೈವ ದೇವರಿಗೆ ನೈವೇದ್ಯ ಮಾಡಿ ಊರವರಿಗೆಲ್ಲ ಊಟ ಹಾಕಿ ತಾವೂ ಊಟ ಮಾಡುವ ಪದ್ಧತಿ ಅನಾದಿಕಾಲದಿಂದ ಬಂದಿತ್ತು. ಈಗ ಆ ಹೆಸರೇ ಮರೆತು ಹೋಗಿದೆ. ಸುಗ್ಗಿ ಬೆಳೆಯನ್ನು (ಭತ್ತದ) ಕಟಾವು ಮಾಡಿ ಭತ್ತ ಮಾಡಿ ಅಕ್ಕಿ ಮಾಡಲಾಗುತ್ತದೆ. ತುಳುನಾಡಿನಲ್ಲಿ ಭತ್ತವನ್ನು ಬೇಯಿಸಿ, ಒಣಗಿಸಿ ಅಕ್ಕಿ ಮಾಡಿ ಕುಚ್ಚಲಕ್ಕಿ ಮಾಡಿ ತಿನ್ನುವುದು ವಾಡಿಕೆ. ಆದರೆ ಹೊಸದೂಟಕ್ಕೆ ಕುಚ್ಚಲಕ್ಕಿ ನಿಷಿದ್ಧ. ಭತ್ತ ಒಣಗಿಸಿ ಕುಟ್ಟಿ ಅಕ್ಕಿ ಮಾಡಲಾಗುತ್ತದೆ. ಹೊಸ ಊಟಕ್ಕೆ ಭತ್ತ ಕುಟ್ಟಲೆಂದೇ ಹತ್ತಾರು ಹೆಂಗಸರು ಬಂದು ಸೇರುತ್ತಾರೆ. ಗೌಡರ ಮನೆಯ ಹೊಸದೂಟದ ಸಂಭ್ರಮಕ್ಕೆ ಹತ್ತಾರು ಬಗೆಯ ಪಲ್ಯ, ಸಾಂಬಾರು, ಗೊಜ್ಜು, ಪಚಿಡಿ ಎಲ್ಲವೂ ಇರಬೇಕು, ಇವುಗಳ ತಯಾರಿ ನಡೆಯುತ್ತದೆ. ಅದರಲ್ಲೂ ಕೆಸುವಿನ ದಂಟಿನ ಗೊಜ್ಜು ಕಡ್ಡಾಯ. ಆ ದಿನ ಅಟ್ಟದಲ್ಲಿದ್ದ ಹೊಸ ಅನ್ನ ತಯಾರಿಸುವ ದೊಡ್ಡ ಮಣ್ಣಿನ ಮಡಕೆಯನ್ನು ಕೆಳಗಿಳಿಸಿ ತೊಳೆಯುತ್ತಾರೆ. ಸುಂದರವಾದ ಚಿತ್ತಾರಗಳಿರುವ ತುಂಬಾ ಆಕರ್ಷಕವಾದ ಮಡಿಕೆ ಅದು. ಅದಕ್ಕೆಂದೇ ಮಾಡಿದ ಮರದ ಚಿತ್ತಾರದ ಸುಂದರವಾದ ಸೌಟು ಸಹ ಇರುತ್ತದೆ. ಸಂಜೆ ನಾಲ್ಕು ಗಂಟೆಯ ಸುಮಾರಿಗೆ ಮನೆಯೊಡತಿ ಆ ಮಡಕೆ ಹಾಗೂ ಸೌಟು ಹಿಡಿದು ಹೊಸ ಅಕ್ಕಿಗೆ ನೀರು ತರಲು ಹೊರಡುತಾರೆ. ಹೋಗುವಾಗ ದೇವರಿಗೆ ನಮಸ್ಕರಿಸಿ ಕೇಳುತ್ತಾರೆ. ತದನಂತರ ಗಂಡ ವ ಮನೆಯವರನ್ನೆಲ್ಲಾ ಬೇರೆ ಬೇರೆಯಾಗಿ “ಹೊಸ ನೀರಿಗೆ ಹೋಗ್ತೀದ್ದೀನಿ”. ಎಂದು ಕೇಳಿದಾಗ “ಸ್ವಾಮಿ ಅಪ್ಪಣೆ ದೇವ ಅಪ್ಪಣೆ” ಎಂದು ಹೇಳುತ್ತಾರೆ. ಮನೆಯೊಡತಿ ನದಿ ಅಥವಾ ಹೊಳೆಯ ಕಡೆಗೆ, ಇಲ್ಲದಿದ್ದರೆ ಕೆರೆ, ಬಾವಿಯ ಬಳಿ ಹೋಗಬೇಕು. ಗಂಧದ ಕೊರಡು ತೇದಿ ಮಡಕೆಗೆ ಹಚ್ಚಿ ಬಾವಿಯಿಂದ ನೀರು ಸೇದುವುದಕ್ಕೆ ಮೊದಲು 5 ವೀಳ್ಯೆದೆಲೆ ಒಂದು ಅಡಿಕೆಯನ್ನು ಬಾವಿಯ ಕಟ್ಟೆಯ ಮೇಲೆ ಇಟ್ಟು ನಮಸ್ಕರಿಸಿ ಗಂಗೆಯನ್ನು ತುಂಬಿಸಿಕೊಂಡು ಪೊಳಿ ಪೊಳಿ ಪೊಳಿ ಎಂದು ಮನೆಗೆ ಪ್ರವೇಶಿಸುತ್ತಾರೆ. ಮನೆಯೊಡತಿ ಆ ದಿನ ಅದಕ್ಕೆಂದೇ ಮೀಸಲಿಟ್ಟ ಬಿಳಿ ವಸ್ತವನ್ನು ಧರಿಸಬೇಕು. ನಡುಮನೆಯಲ್ಲಿರುವ ಒಲೆ ಹಚ್ಚೆ ಮತ್ತೆ ಎಲ್ಲರ ಅಪ್ಪಣೆ ಪಡೆದು (ಹೊಸ ಅಕ್ಕಿಗೆ ನೀರಿಡುತ್ತೇನೆ) ಒಲೆಗೆ ಮಡಿಕೆ ಏರಿಸುತ್ತಾರೆ. ನೀರು ಕಾದಾಗ ಬಿಳಿ ಅಕ್ಕಿಯನ್ನು ಹಾಕಿ ಚೆನ್ನಾಗಿ ಬೇಯಿಸುತ್ತಾರೆ. ಅಕ್ಕಿ ಹಾಕುವಾಗಲೂ ಅಪ್ಪಣೆ ಪಡೆಯಬೇಕು.ಅನ್ನ ಉದುರುದುರಾಗಿರಬಾರದು. ಚೆನ್ನಾಗಿ ಬೇಯಿಸಿ(ಮೊಸರನ್ನದಂತೆ) ಅದಕ್ಕೆ ತೆಂಗಿನ ತುರಿಯನ್ನು ಹಾಕುತ್ತಾರೆ. ಮತ್ತು ಅನ್ನ ಘುಂ ಎಂದು ಪರಿಮಳಿಸಲು ಗಂಧಸಾಲೆಯ ಸೊಪ್ಪು (ಒಂದು ಜಾತಿಯ ಗಿಡ) ಹಾಕುತ್ತಾರೆ. ಸಂಜೆ ಆವರಿಸುತ್ತಿದ್ದಂತೆ ಊರವರು ಒಬ್ಬೊಬ್ಬರಾಗಿ ಬರಲಾರಂಭಿಸುತ್ತಾರೆ. ಹೆಂಗಸರು ಅಡುಗೆ ಮನೆ ಸೇರಿ ಸಹಾಯ ಮಾಡಿದರೆ, ಗಂಡಸರು ಮಾತನಾಡುತ್ತಾ ಕಾಲ ಕಳೆಯುತ್ತಾರೆ. ಎಂಟು ಗಂಟೆಗೆಲ್ಲಾ ಅಡುಗೆ ಮುಗಿಯುತ್ತವೆ. ದೈವ ದೇವರಿಗೆ ಎಡೆ ಇಟ್ಟು ನಮಸ್ಕರಿಸುತ್ತಾರೆ. ಎಲ್ಲರನ್ನೂ ಸಾಲಾಗಿ ಕೂರಿಸಿ ಊಟ ಬಡಿಸುತ್ತಾರೆ. ಅನ್ನವನ್ನು ಮನೆಯೊಡತಿಯೇ, ಬಡಿಸುತ್ತಾರೆ. ಮನೆಯ ಹಿರಿಯ ಎಲ್ಲರ ಅಪ್ಪಣೆ ಪಡೆದು ಸ್ವೀಕರಿಸಿದರೆ ಎಲ್ಲರೂ ಪರಸ್ಪರ ಅಪ್ಪಣೆ ಪಡೆದು ಸ್ತೀಕರಿಸುತ್ತಾರೆ.“ಪುದ್ವಾರ್‌ ಒಣಸ್‌ ಮಲ್ಪುವೆ” (ಹೊಸದೂಟ ಮಾಡ್ತೇನೆ) ಎಂದು ಕೇಳಿದಾಗ “ಸ್ವಾಮಿ ಅಪ್ಪಣೆ” ಎನ್ನುತ್ತಾರೆ. ಮನೆಯಲ್ಲಿ ಎಳೆ ಮಕ್ಕಳು ಇದ್ದರೆ ಅವರಿಗೆ ಆ ದಿನವೇ ಅನ್ನ ಪ್ರಾಶನದ ಕಾರ್ಯಕ್ರಮ. ಮನೆಯ ಹಿರಿಯರು ಹರಸಿ ಅನ್ನ ತಿನ್ನಿಸುತ್ತಾರೆ. ಹೊಸದಾಗಿ ಮದುವೆಯಾದ ಆ ಮನೆಯ ಗಂಡು ಹೆಣ್ಣು ಆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲೇಬೇಕು. ಎಲ್ಲರ ಊಟವಾದ ಮೇಲೆ ಎಲ್ಲರ ಅಪ್ಪಣೆ ಪಡೆದು ಮನೆಯೊಡತಿ ಊಟ ಮಾಡುವುದು ಸಂಪ್ರದಾಯ.
ದೀಪಾವಳಿ: ದಕ್ಷಿಣ ಕನ್ನಡದ ಗೌಡರ ಮನೆಗಳಲ್ಲಿ ದೀಪಾವಳಿಯ ಆಚರಣೆಯೇ ವೈವಿಧ್ಯ ಪೂರ್ಣ ವಾದುದು. ನರಕ ಚತುರ್ದಶಿಯಿಂದೆ ಮೊದಲ್ಗೊಂಡು ಬಲಿಪಾಡ್ಯಮಿಯವರೆಗೆ ಮೂರು ದಿನ ಸಂಭ್ರಮದ ಆಚರಣೆ ನಡೆಯುತ್ತದೆ. ನರಕ ಚತುರ್ದಶಿಯಂದು ಶ್ರೀ ಕೃಷ್ಣ ನರಕಾಸುರನೆಂಬ ಅಸುರನನ್ನು ಸಂಹರಿಸಿ ಬಂಧನದಲ್ಲಿದ್ದ ಹದಿನಾರು ಸಾವಿರ ಸ್ತೀಯರಿಂದ ವಿಜಯ ಮಾಲೆಯನ್ನು ಅರ್ಪಿಸಿಕೊಂಡ ದಿನ. ವರಹಾವತಾರಿಯಾಗಿ ಭೂದೇವಿಯನ್ನು ಸುರುಳಿಯಾಗಿ ಸುತ್ತಿಕೊಂಡು ತನ್ನ ಕಂಕುಳಲ್ಲಿ ಇಟ್ಟುಕೊಂಡಿದ್ದ ಹಿರಣ್ಯಾಕ್ಷನನ್ನು ಸಂಹರಿಸಿದ ಮಹಾವಿಷ್ಣು ಮತ್ತು ಭೂದೇವಿಗೆ ಜನಿಸಿದವನೇ ನರಕಾಸುರ. ಬ್ರಹ್ಮನನ್ನು ಕುರಿತು ತಪಸ್ಸನ್ನಾಚರಿಸಿ ನನ್ನ ತಂದೆ ತಾಯಿಯ ವಿನಃ ಇತರರಿಂದ ನನಗೆ ಸಾವು ಬರದೇ ಇರಲಿ ಎಂಬ ವರವನ್ನು ಪಡೆದು ಮೆರೆಯುತ್ತಿದ್ದ ನರಕಾಸುರನನ್ನು ಶ್ರೀಕೃಷ್ಣನು ಸತಿ ಸತ್ಯಭಾಮೆಯ ಜೊತೆ ಸೇರಿ ಸಂಹರಿಸಿದ ಎಂಬ ಕಥೆ ಪುರಾಣದಲ್ಲಿದೆ.


ಮರುದಿನ ಅಮಾವಾಸ್ಯೆ ಆ ದಿನ ಬಲಿಯೇಂದ್ರ ಪೂಜೆಗೆಗೆ ಪೂರ್ವ ತಯಾರಿ ನಡೆಯುತ್ತದೆ. ಗಂಡಸರು ಕಾಡಿನಿಂದ ಪಾಳೆಮರ (ಬಲಿಯೇಂದ್ರ ಮರ)ದ ಎರಡು ಕೊಂಬೆಗಳನ್ನೇ ತರುತ್ತಾರೆ. ಈ ಮರದ ವೈಶಿಷ್ಟ್ಯವನ್ನು ತಿಳಿದುಕೊಳ್ಳಬೇಕು ಮಾಮೂಲಿ ಎಲ್ಲಾ ಮರಗಳಂತೆ ದೊಡ್ಡದಾಗಿಯೇ ಬೆಳೆಯುವ ಮರದಲ್ಲಿ ಕೊಂಬೆಗಳು ಸಹ ಎಲ್ಲಾ ಮರಗಳಂತೆ ಸಹಜವಾಗಿಯೇ ಇರುತ್ತವೆ. ಆದರೆ ಮರದಲ್ಲಿ ಅಲ್ಲೊಂದು ಇಲ್ಲೊಂದು ಎಂಬಂತೆ ಕೆಲವು ಕೊಂಬೆಗಳು ಮಾತ್ರ ವಿಶಿಷ್ಟವಾಗಿರುತ್ತದೆ. ಒಂದು ಸ್ವಲ್ಪವೂ ಅಂಕು ಡೊಂಕು ಇಲ್ಲದೆ ಆರರಿಂದ ಏಳು ಅಡಿ ಉದ್ದಕ್ಕೆ ಬೆಳೆದು ಅದರ ತುದಿಯಲ್ಲಿ ಮೂರರಿಂದ ನಾಲ್ಕು ಕವಲುಗಳಿರುತ್ತವೆ.ಆ ಕೊಂಬೆಯನ್ನು ಕತ್ತರಿಸಿ, ಕವಲುಗಳನ್ನು ನಾಲ್ಕು ಇಂಚು ಬಿಟ್ಟು ಕತ್ತರಿಸಿ. ಆರು ಅಡಿ ಉದ್ದದ ಕೊಂಬೆ ತಂದು ಅಮಾವಾಸ್ಕೆಯ ದಿನ ಸಾಯಂಕಾಲ ತುಳಸಿ ಕಟ್ಟೆಯ ಬಲಭಾಗದಲ್ಲಿ ನೆಟ್ಟು ಕೆಟ್ಟಿ ಕಟ್ಟಿ ಸೆಗಣಿ ಸಾರಿ ಬತ್ತದ ಕದಿರು, ಕೇಪುಳ ಹೂವು ಇಟ್ಟು. ಕಟ್ಟಿ ಮಸಿಗುವ ಒಂದು ಜಾತಿಯ ಕೆಂಪು ಹೂವು, ತುಳುನಾಡಿನಲ್ಲಿ ಪೂಜೆಗೆ ಸರ್ವಶ್ರೇಷ್ಠವಾದ ಹೂವು ಅದು.) ಇಟ್ಟು ದೀಪ ಹಚ್ಚಿ ಫಲ ವಸ್ತುಗಳನ್ನು ಅಥವಾ ಎಳನೀರು ಇಡುತ್ತಾರೆ. ಮರುದಿನ ಅತ್ಯಂತ ಸಂಭ್ರಮದ ದಿನ. ಮನೆಯ ಹೆಂಗಸರು ಬೆಳಿಗ್ಗೆಯಿಂದಲೇ ಇಡ್ಲಿ, ದೋಸೆಗಾಗಿ ಅಕ್ಕಿ ರುಬ್ಬಿ ಬುರುಗಲು ಇಡುವ ಕಾಯಕದಲ್ಲಿ ತೊಡಗಿದರೆ ಮಕ್ಕಳು ಬೆಟ್ಟಗುಡ್ಡ ಅಲೆದು ವಿವಿಧ ಹೂವುಗಳನ್ನು ಆರಿಸಿ ತರುವ ಕಾರ್ಯದಲ್ಲಿ ತೊಡಗುತ್ತಾರೆ. ಬಲಿಯೇಂದನಿಗೆ ಅತ್ಯಂತ ಶ್ರೇಷ್ಠವಾದ ಹೂವು ಪಾದೆ ಹೂವು, ಕಲ್ಲು ಮೊರಡಿಯ ಮೇಲೆ ಪುಟ್ಟ ಪುಟ್ಟ ಅಂದರೆ ಎರಡು ಮೂರು ಇಂಚು ಎತ್ತರದ ನೋಡಲು ಮರದಂತೆ ಕಾಣಿಸುವ ಬಿಳಿಯ ಸಸ್ಯ ಬೆಳೆಯುತ್ತದೆ. ಅವನ್ನ ತುಳುನಾಡಿಗರು ಪಾದೆ ಹೂವು ಎಂದು ಕರೆಯುತ್ತಾರೆ. ಜಿಟ್ಟಕ್ಕೆ ಹೋಗಿ ಕರಿಕಲ್ಪಗುಡ್ಡೆಯ ಮೇಲೆ ಬೆಳೆದಿರುವ ಪಾದೆಹೂವನ್ನು ಮಕ್ಕಳು ಬಹಳ ಉತ್ಸಾಹದಿಂದ ಆರಿಸಿ ತಂದು ಮಾಲೆ ಕಟ್ಟುತ್ತಾರೆ. ಗೊಂಡೆ ಹೂವು, (ಕರವೀರದ ಜಾತಿಗೆ ಸೇರಿದ ಹೂವು ತಂದು ಮಾಲೆ ಮಾಡಿ ಆ ದಿನ ಸಂಜೆ ವಿಶೇಷವಾಗಿ ಬಲಿಯೇಂದ್ರನನ್ನು ಅಲಂಕರಿಸಲಾಗುತ್ತದೆ. ಇತ್ತ ಅಡುಗೆ ಮನೆಯಲ್ಲಿ ದೋಸೆ, ಇಡ್ಲಿಯ ತಯಾರಿ ಭರದಿಂದ ಸಾಗುತ್ತದೆ. ಕೋಳಿ ಸಾರು, ಮಾಡುತ್ತಾರೆ. ಎಂದು ಬೇರೆ ಹೇಳಬೇಕಿಲ್ಲ. ಬಲಿಯೇಂದ್ರ ಶುದ್ಧ ಸಸ್ಯಾಹಾರಿ, ಮನೆಯವರಿಗೆ ಮಾತ್ರ ಕೋಳಿ, ಮೀನಿನ ಅಡುಗೆ ಎಂಬುದು ವಿಶೇಷ. ಅಲಂಕರಿಸಿ ನಿಂತ ಬಲಿಯೇಂದನಿಗೆ ಬತ್ತದ ಅರಳು, ಅವಲಕ್ಕಿ, ಬಾಳೆ ಹಣ್ಣು, ಬೆಲ್ಲದ ನೈವೇದ್ಯ ಎರಡು ಹಣತೆಗಳನ್ನು ಮೇಲಿನ ಕವಲುಗಳ ಮಧ್ಯೆ ಮಾಡಿ ಮನೆಯ ಹಿರಿಯರು ಬಲಿಯೇಂದನಿಗೆ ಪೂಜೆ ಸಲ್ಲಿಸುತ್ತಾರೆ. ಬಲಿ ಚಕ್ರವರ್ತಿಯನ್ನು ವಾಮನ ಅವತಾರಿಯಾಗಿ ಮಹಾವಿಷ್ಣು ಪಾತಾಳಕ್ಕೆ ತಳ್ಳಿದ ಕತೆಯನ್ನು ಪಾಡ್ದನದ ರೂಪದಲ್ಲಿ ಹೇಳುತ್ತಾರೆ.
ದೈತ್ಯದಾನವೆರೆಗರಸಾದ್‌! ದೈತ್ಯ ವಿರೋಚನ ಮಗೆಯಾದ್‌!
ನಿತ್ಯದೇವೇಂದ್ರಡ ಪಗೆಯಾದ್‌!
ಸತ್ಯದ ಪುದರ್‌ನ ಮೆರೆಪಾದ್‌।
ಬಲತಯೆಂದ್‌ ಪಣ್ಣಾಯಿ ನಮಾ।
ಬಲಿಯೇಂ ದ್ರಾಗ್‌ ನಮೋ ನಮೋ!
ಬಲಬಲಬಲಬಲ ಬಲಿಂಕೇಂದ್ರ
ಬಲಿಗೆ ತ್ತೋಣುಲ ಬಲಿಯೇಂದ್ರ!
ಸಿರಿಸಿರಿಸಿರಿಸಿರಿ ಬಲಿಯೇಂದ್ರಾ
ಸಿರಿ ಕಣಲ ಬಲಿಯೇಂದ್ರ! ಈ ಊರುದ ಪಗೆ ಕೊನೊದು ಆ ಊರ ಪೊಲಿ ಕಣಲ ಬಲಿಯೇಂದ್ರ ಕೂ..ಬಲಿಯೇಂದ್ರ ಕೂ.. ಎಂದು ಕೂಗಿ ಭತ್ತದ ಅರಳನ್ನು ಬಲಿಯೇಂದ್ರನ ಮೇಲೆ ಹಾಕಿದಾಗ ಎಲ್ಲರೂ ಕೂ... ಕೂ... ಕೂ.. ಎಂದು ಭತ್ತದ ಅರಳನ್ನು ಬಲಿಯೇಂದ್ರನ ಮೇಲೆ ಎರಚುತ್ತಾರೆ.ಆನಂತರ ಗದ್ದೆಯ ಬಳಿ, ದನದ ಹಟ್ಟಿಯ ಬಳಿ, ಹಾಗೂ ನೊಗ ನೇಗಿಲು, ಭೂತ ಚೌವಡಿಯ ಬಳಿ ಒಂದೊಂದು ಪುಟ್ಟ ಬಲಿಯೇಂದ್ರ ಮರದ ಕಡ್ಡಿ ಊರಿ, ಬಾಳೆ ಎಲೆಯಲ್ಲಿ. ಅರಳು ಎಡೆಇಟ್ಟು ದೀ ದ ಇಟ್ಟು ಕೂ... ಬಲಿಯೇಂದ ಕೂ.. .. ಎಂದು ಕೂಗುವುದು ಸಂಪ್ರದಾಯ.ಆನಂತರ ನಡೆಯುವುದೇ ಗೋಪೂಜೆ. ಆಗಿನ ಕಾಲದಲ್ಲಿ ಹಟ್ಟಿ ತುಂಬ ಗೋವುಗಳು, ಅವುಗಳ ಕರುಗಳು ಎತ್ತುಗಳು ಎಲ್ಲವಕ್ಕೂ ಪೂಜೆ ನಡೆಯುತ್ತದೆ. ದೊಡ್ಡ ಮೊರೆ ಮೊರದ ಅಂಚಿನಲ್ಲಿ ಏಳು ಉಂಡೆ ಸೆಗಣಿ ಇಟ್ಟು ಅದರ ಮೇಲೆ ಹಣತೆ ಇಟ್ಟು ದೀಪ ಹಚ್ಚಿ ಹೂವು ಅಕ್ಟತೆ ಹಾಕಿಕೊಂಡು ಹಟ್ಟಿಗೆ ಮನೆಯೊಡತಿ ಹೊರಟರೆ ಅವರನ್ನು ಮನೆಯವರೆಲ್ಲ ಮಾಡಿದ ಅಡುಗೆ, ಬಾಳೆಹಣ್ಣು, ಅವಲಕ್ಕಿ ಎಲ್ಲವನ್ನು ಹಿಡಿದು ಅನುಸರಿಸುತ್ತಾರೆ. ದನಕರುಗಳಿಗೆ ಸ್ನಾನ ಮಾಡಿಸಿ ಕೊಟ್ಟಿಗೆಯನ್ನು ಶುಚಿಗೊಳಿಸಿ ತಳಿರು ತೋರಣಗಳಿಂದ ಅಲಂಕರಿಸಿರುತ್ತಾರೆ.ಮೊರದ ಆರತಿಯನ್ನು ಒಂದೊಂದು ಹಸು ಎಗೂ ಅವುಗಳ ಬೆನ್ನ ಮೇಲಿಂದ ಬೆಳಗುತ್ತಾ “ತುಡರ್‌ ಮಗ ತುಡರ್‌ .ದುಂಬೂತ ಕಾಲೋಡು ದಿನಾ ದಿನಾ ಪರ್ಬ. ಇತ್ತೇದ ಕಾಲೋಡು ವರ್ಸೊಗೊಂಜಿ ಪರ್ಬ ಮಗಾ.. ಕಲ್ಲಡಿತ ನೀರ್‌ ಮಗ ಮುಲ್ಲಡಿತ ಪಂತಿ ಮಗ ಬಂಜಾರ ಮೇಯೊಂದು ಬರೋಡು ಮಗ ತುಡರ್‌ ಮಗ ತುಡರ್‌ ....” ಎಂದು ಸುಶ್ರಾವ್ಯವಾಗಿ ಹಾಡುತ್ತಾ ಬೆಳಕು ತೋರಿಸುತ್ತಾರೆ. ಮತ್ತು ಹೂವು ಅಕ್ಷತೆಯನ್ನು ಅವುಗಳ ಮೇಲೆ ಎರಚುತ್ತಾರೆ. ದನ ಕರುಗಳಿಗೆ ಹೂವಿನ ಹಾರ ಹಾಕಿ ಅಲಂಕಾರವನ್ನು ಮಾಡುತ್ತಾರೆ. ಮನೆಯ ಹಿರಿಯರು ಆರತಿ ಮಾಡಿದ ಮೇಲೆ ದನಕರುಗಳಿಗೆ ಬಾಳೆಹಣ್ಣು, ಅವಲಕ್ಕಿ, ಇಡ್ಲಿ. ದೋಸೆ ಹೀಗೆ ತಿಂಡಿ ತಿನಿಸುಗಳನ್ನು ತಿನ್ನಿಸುತ್ತಾರೆ. ಹಾಗೆ ಪೂಜಿಸಲ್ಪಟ್ಟ ಬಲಿಯೇಂದ್ರ ಕೆಲ ಗೌಡರ ಮನೆಗಳಲ್ಲಿ ಮುಂದಿನ ಹುಣ್ಣಿಮೆಯ ವರೆಗೂ ಪೂಜಿಸಲ್ಪಡುತ್ತಾನೆ. ಹುಣ್ಣಿಮೆಯ ದಿನ ಕಿತ್ತು ನೀರ ತೊರೆಯ ಬಳಿ ವಿಸರ್ಜಿಸಲಾಗುತ್ತದೆ. ಇಂದು ಅಂತಹ ಆಚರಣೆಗಳು ಯಾವುದೂ ಕಾಣಿಸುತ್ತಿಲ್ಲ ಎಂಬುದು ವಿಷಾದಕರ ಸಂಗತಿಯಾಗಿದೆ