ಬದಲಾವಣೆ ಹಾದಿಯಲ್ಲಿ ಗೌಡ ಯುವ ಸಮುದಾಯ
ಲೇಖಕರು: ಡಾ.ವಿಶ್ವನಾಥ ಬದಿಕಾನ,
ಕನ್ನಡ ವಿಭಾಗ ಸಂತ ಅಲೋಶಿಯಸ್ ಕಾಲೇಜು (ಸ್ವಾಯತ್ತ) ಮಂಗಳೂರು
ಗೌಡರು ದಕ್ಷಿಣ ಕನ್ನಡ ಜಿಲ್ಲೆಗೆ ಹಾಸನ ಜಿಲ್ಲೆಯ ಐಗೂರು ಸೀಮೆಯಿಂದ ಬಂದರು. ಆರಂಭದಲ್ಲಿ ಗೌಡರು ರಾಗಿಯನ್ನು ಪ್ರಧಾನ ಬೆಳೆಯಾಗಿ ಬೆಳೆಸುತ್ತಿದ್ದರು. 'ವಸ್ತು ವಿನಿಮಯ ಪದ್ಧತಿ'ಯಿಂದ 'ಹಣ ವಿನಿಮಯ ಪದ್ಧತಿ'ಗೆ ಬದಲಾದ ಮೇಲೆ ಕೃಷಿಪದ್ಧತಿಯಲ್ಲೂ ಬಹಳಷ್ಟು ಬದಲಾವಣೆ ಕಂಡುಬಂತು. 'ರಾಗಿಕುಮರಿ' ಬೇಸಾಯದಿಂದ ಸಂಪನ್ಮೂಲರಾಗಿ ಸಮತಟ್ಟಾದ ನೀರಾವರಿ ಪ್ರದೇಶದಲ್ಲಿ ಬತ್ತದ ಗದ್ದೆ ನಿರ್ಮಿಸಿದರು. "ರಾಗಿಕುಮರಿ'ಯಲ್ಲಿ ಮರಗೆಣಸು, ಕಾಳುಮೆಣಸು ಬೆಳೆದರು. 'ರಾಗಿಕುಮರಿ' ಸೊಪ್ಪಿನ ಗುಡ್ಡವಾಗಿ, ಬೀಜದ ಕೊಚ್ಚಿಯಾಗಿ ಬೆಳೆಯಿತು. ಗದ್ದೆ ಬೇಸಾಯಕ್ಕೆ ಗೊಬ್ಬರದ ನೆಲೆಯಾಗಿ ಸೊಪ್ಪಿನಗುಡ್ಡ ಉಪಯೋಗವಾಯಿತು. ಕಾಲಕ್ರಮೇಣ ಬತ್ತದ ಗದ್ದೆಯಲ್ಲಿ ತರಕಾರಿ ಕೃಷಿ ಬಂತು. ತೊಂಡೆಕಾಯಿ ಚಪ್ಪರದಡಿ ಅಡಿಕೆ ಗಿಡಬೆಳೆದು ಬತ್ತದಗದ್ದೆ ಅಡಿಕೆ ತೋಟವಾಯಿತು. ಸೊಪ್ಪಿನ ಗುಡ್ಡಗಳೆಲ್ಲ 'ರಬ್ಬರ್ ತೋಟ'ಗಳಾಗಿ ಪರಿವರ್ತನೆಯಾದುವು. ಅಡಿಕೆ ತೋಟದಲ್ಲಿ ಕಾಳುಮೆಣಸು, ವೆನಿಲ್ಲಾ, ಕೊಕ್ಕೋ, ತೆಂಗು, ಬಾಳೆ, ಕಾಫಿ, ಏಲಕ್ಕಿ ಹೀಗೆ ಹಲವಾರು ವಾಣಿಜ್ಯ ಬೆಳೆಗಳು ಬಂದುವು. ಒಟ್ಟಿನಲ್ಲಿ ದಕ್ಷಿಣ ಕನ್ನಡದ ಗೌಡರು ಕೃಷಿ ಕಾರ್ಯದಲ್ಲಿ ಪ್ರಬಲರಾದರು.
ಶೈಕ್ಷಣಿಕ ಸಂಘಟನೆ
ದಕ್ಷಿಣ ಕನ್ನಡ ಶೈಕ್ಷಣಿಕವಾಗಿ ದೇಶದ ಪ್ರಥಮ ನಗರವೆಂದು ಹೆಸರುವಾಸಿಯಾಗಿದೆ. ಈ ಜಿಲ್ಲೆಯ ಸುಳ್ಯ, ಸುಬ್ರಹ್ಮಣ್ಯ, ಪುತ್ತೂರು, ಬೆಳ್ತಂಗಡಿ, ಬಂಟ್ವಾಳ, ವಿಟ್ಲ, ಮಂಗಳೂರು ಮುಂತಾದ ಕಡೆ ಶೈಕ್ಷಣಿಕ, ಸಾಹಿತ್ಯಕ, ಸಾಂಸ್ಕೃತಿಕ, ರಾಜಕೀಯ, ಸಂಶೋಧನೆ, ವೈದ್ಯಕೀಯ, ಸಾಮಾಜಿಕ ಆಂದೋಲನ, ಪತ್ರಿಕಾ ವಲಯಗಳಲ್ಲಿ ತಮ್ಮದೇ ಆದ ಗುರುತ್ವ (Identity) ವನ್ನು ಸಾಧಿಸಿ ಗೌಡರು ಬೆಳೆದು ನಿಂತಿದ್ದಾರೆ. ಅಮರ ಸುಳ್ಯದ ಶಿಲ್ಪಿ ಶ್ರೀ ಕುರುಂಜಿ ವೆಂಕಟರಮಣ ಗೌಡರು ಸುಳ್ಯ ಪರಿಸರದಲ್ಲಿ ಹಲವಾರು ಶಿಕ್ಷಣ ಸಂಸ್ಥೆಗಳನ್ನು ಹುಟ್ಟುಹಾಕಿ ಕಟ್ಟಿ ಬೆಳೆಸಿದ್ದಾರೆ. ಇವರ ಸಂಸ್ಥೆಯಲ್ಲಿ ಓದಿದ ದುಡಿದ ಗೌಡ ಯುವ ಸಮುದಾಯ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ. ಅಲ್ಲದೆ 'ಗೌಡ ಸೋಶಿಯೋ ಎಜ್ಯುಕೇಶನ್ ಫೌಂಡೇಶನ್(ರಿ) ಸುಳ್ಯ ದ.ಕ., ಗೌಡ ಯುವ ಸೇವಾ ಸಂಘ(ರಿ) ಸುಳ್ಯ ದ.ಕ.. ಮಲ್ನಾಡ ಶಿಕ್ಷಣ ಸಂಸ್ಥೆ ಸುಳ್ಯ ದ.ಕ., ದಕ್ಷಿಣ ಕನ್ನಡ ಜಿಲ್ಲಾ ಒಕ್ಕಲಿಗ ಸಂಘಟಣೆ, ಕೊಡಗು ಮತ್ತು ದಕ್ಷಿಣ ಕನ್ನಡ ಜಿಲ್ಲಾ ಒಕ್ಕಲಿಗ ಸಂಘಟಣೆಗಳು ಸಂಘಟನೆಗಳು ಹತ್ತು ಹಲವಾರು ಕಾರ್ಯಕ್ರಮ ನಿರ್ವಹಿಸುತ್ತಿವೆ.
ಶಿಕ್ಷಣ ಕ್ಷೇತ್ರದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಗೌಡ ಸಮುದಾಯದ ಸಾಧನೆಯೆನು ?
ವೃತ್ತಿಯಲ್ಲಿ ಶಿಕ್ಷಕರಾಗಿ ಪ್ರವೃತ್ತಿಯಲ್ಲಿ ಸೃಜನಶೀಲ ಸಾಹಿತ್ಯ ರಚನೆ ಮತ್ತು ಸಂಶೋಧಕರಾಗಿ ಅಪೂರ್ವ ಸಾಧನೆ ಮಾಡಿರುವ ಗೌಡ ಸಮುದಾಯದ ಸಾಧಕರು ಹಲವರಿದ್ದಾರೆ.
ಹಿರಿಯ ತಲೆಮಾರು: ಕೊಳಂಬೆ ಪುಟ್ಟಣ್ಣಗೌಡ, ಟಿ.ಜಿ. ಮುಡೂರು, ಪ್ರೊ. ಕೋಡಿ ಕುಶಾಲಪ್ಪಗೌಡ, ಡಾ. ಸುಕುಮಾರಗೌಡ, ಕಾಣಿಚ್ಚಾರು ಸಂಕಪ್ಪಗೌಡ, ಅಡಪ್ಪಂಗಾಯ ಎಲ್ಕ್ಯಣ್ಣಗೌಡ, ಕುತ್ಕಾಳ ನಾಗಪ್ಪಗೌಡ, ಡಾ. ಚಿದಾನಂದಗೌಡ ಕೊಳಂಬೆ, ಜಯಮ್ಮ ಚೆಟ್ಟಮಾಡ, ಶೀಲಾವತಿ ಕೊಳಂಬೆ, ಡಾ. ಕೆ.ವಿ. ವೆಂಕಟ್ರಮಣ, ಶಿವಣ್ಣ ನೆಲೆಮನೆ.
ಯುವ ತಲೆಮಾರು: ಡಾ. ಕೆ. ಚನ್ನಪ್ಪಗೌಡ, ಡಾ. ಪುರುಷೋತ್ತಮ ಬಿಳಿಮಲೆ, ಡಾ. ಪೂವಪ್ಪ ಕಣಿಯೂರು, ಯು. ಸುಬ್ರಾಯ ಗೌಡ, ಡಾ. ಯು.ಪಿ. ಶಿವಾನಂದ, ಎ.ಕೆ. ಹಿಮಕರ, ತೇಜಕುಮಾರ್ ಬಡ್ಡಡ್ಕ, ಜಿ. ತುಕಾರಾಮ ನಿಡ್ಲೆ, ಕೆ. ಆರ್. ವಿದ್ಯಾದರ, ವೆಂಕಟ್ ಮೋಂಟಡ್ಕ, ಶ್ರೀನಿವಾಸ ಕಾರ್ಕಳ, ಡಾ. ವಿಶ್ವನಾಥ ಬದಿಕಾನ, ಡಾ. ಯದುಪತಿ ಗೌಡ, ಯತಿರಾಜ ಬೂತಕಲ್ಲು, ಶೇಷಗಿರಿ ಮೂಕಮಲೆ, ಸಂಜೀವ ಕುದ್ದಾಜೆ, ಕೆ.ಆರ್. ಗಂಗಾಧರ, ಪ.ಯಂ. ಆನಂದಗೌಡ, ಡಾ. ರೇವತಿ ನಂದನ.
ಗೌಡ ಯುವ ಸಮುದಾಯದ ಯೋಚನೆ ಎತ್ತಸಾಗಿದೆ ?
ನಾವು ಎಷ್ಟೇ ಓದಿದರು, ಯಾವುದೇ ಉನ್ನತ ಹುದ್ದೆಯಲ್ಲಿದ್ದರೂ ಹಿತ್ತಿಲ ಗಿಡನೆಡಲು ಒಕ್ಕಲುತನ ಮಾಡಲು ಮರೆಯಲಿಲ್ಲ. ಅಂದರೆ ನಮ್ಮೊಳಗೆ ನಮ್ಮ ಮೂಲ ಕಸುಬಿನ ಕೃಷಿಕ ಇದ್ದಾನೆ ಎಂದರ್ಥ. ಆದರೆ ಇಂದಿನ ಆಧುನಿಕ ಭರಾಟೆಯಲ್ಲಿ ನಮ್ಮ ಯುವಜನರು ಸಂಸ್ಕೃತಿ, ಭಾಷೆ. ಪರಿಸರ, ಕಸುಬು ಇವೆಲ್ಲವನ್ನು ಮರೆತು ಹೊಸದರತ್ತ ಮೊರೆಹೋಗುತ್ತಿದ್ದಾರೆ. ನಮ್ಮ ಬಾಲ್ಯದ ದಿನದ ಕನಸುಗಳು, ಆ ಕನಸುಗಳು ಮಾತ್ರವೇ ತುಂಬಿಕೊಂಡಿದ್ದ ಕಣ್ಣುಗಳಿಗೆ ಮನೆಯ ಬಡತನದ ಬೆನ್ನಹಿಂದಿರುವ ಸಹೋದರತೆಯ ಬಂಧಗಳು, ಸಂಬಂಧಗಳು ಮತ್ತು ಆ ಮೂಲಕ ಬಂದೊದಗಿದ ಜವಾಬ್ದಾರಿಗಳು ಯಾರಿಗೂ ಹೊರೆ ಯೆಂದು ಅನ್ನಿಸಿರಲಿಲ್ಲ. ಅದಕ್ಕೆ ಕಾರಣಗಳು ಆಗ ಬಾಲ್ಯವನ್ನು ಅನುಭವಿಸುತ್ತಿದ್ದ ರೀತಿ ಹಾಗಿತ್ತು. ಮನೆಯಂಗಳ ದಲ್ಲಿಯೋ, ತೋಟದಲ್ಲಿಯೋ, ಗದ್ದೆ ಯಲ್ಲಿಯೋ, ಶಾಲಾ ಆಟದ ಮೈದಾನದಲ್ಲೋ ಯಕ್ಷಗಾನ, ಸೇವೆಯ ಆಟ, ಟೆಂಟ್ ನಾಟಕ, ಹಳೆ ವಿದ್ಯಾರ್ಥಿ ದಿನಾಚರಣೆ ಪ್ರಯುಕ್ತ ನಾಟಕಗಳು ಹೀಗೆ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿದ್ದವು. ಇವುಗಳನ್ನು ನೋಡಲು ಮೈಲುಗಟ್ಟಲೆ ಕಾಲುನಡಿಗೆಯಲ್ಲಿ ಹೋಗಿ ರಾತ್ರಿಯಿಡೀ ಆಟ ನೋಡುತ್ತಿದ್ದೆವು. ಆಟದ ಅಂಗಳದಲ್ಲಿ ಕೆಲವು ಸೋಜಿ ಅಂಗಡಿಗಳು ಹೊಟ್ಟೆಯನ್ನು ತಂಪು ಮಾಡುತ್ತಿದ್ದವು. ರಾತ್ರಿ ನೋಡಿದ ಆಟದ ಕತೆಯನ್ನು ಹಗಲು ಕೆಲಸ... ಕಾರ್ಯಗಳಲ್ಲಿ ಭಾಗಿಯಾದವರೊಂದಿಗೆ ಹಂಚಿಕೊಂಡು. : ರೋಮಾಂಚನಗೊಳ್ಳುತ್ತಿದ್ದೆವು.
ಶಾಲೆಗಳಲ್ಲಿ ನಡೆವ ವಾರದ ಸಭೆ, ಭಜನೆಗಳು ಹಾಡುವ, ಕುಣಿವ, ಭಾಷಣ ಮಾಡುವ ಸ್ಪರ್ಧೆಗಳಿಗೆ ತಯಾರಾಗುವಂತೆ ಪ್ರೇರೇಪಣೆ ನೀಡುತ್ತಿದ್ದವು. ಇಂತಹ ಪರಿಸರ ನಮ್ಮನ್ನು ಸಾಕಷ್ಟು ಉಲ್ಲಾಸದಿಂದಿರುವಂತೆ ಮಾಡುತ್ತಿದ್ದವು. ಆ ಮೂಲಕ ಸಾಹಿತ್ಯ. ಕಲೆ, ಭಾಷೆ, ಸಂಸ್ಕೃತಿ, ಪರಿಸರಗಳತ್ತ ನಮ್ಮ ಆಸಕ್ತಿ ಬೆಳೆಯುವಲ್ಲಿ ಅವಕಾಶವಾಯಿತು. ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿ ಗಳಿಗೆ ಭಾಷೆ. ಸಾಹಿತ್ಯ, ಸಂಸ್ಕೃತಿ," ಕಲೆ, ಸಂಗೀತ, ನೃತ್ಯ ಮೊದಲಾದ ವೇದಿಕೆಗಳಲ್ಲಿ ಬಿತ್ತಿ ಪತ್ರಿಕೆಗಳಲ್ಲಿ ನುಡಿಚಿತ್ರವನ್ನೋ, ಕತೆ ಕವನಗಳನ್ನೋ ಬರೆದು ತಮ್ಮದೇ ಪ್ರತಿಭೆಗಳನ್ನು ಪ್ರದರ್ಶಿಸುವ ಹಲವಾರು ಅವಕಾಶವಿರುತ್ತವೆ. ಇಂತಹ ಬರವಣಿಗೆಗಳು ಕಾಲೇಜು ವಾರ್ಷಿಕದಲ್ಲೋ ಸ್ಥಳೀಯ ಪತ್ರಿಕೆಗಳಲ್ಲೋ ಆಯ್ಕೆ. ಯಾಗಿ ಪ್ರಕಟಣೆಯಾಗುತ್ತವೆ. ಸಾಹಿತ್ಯ ಸಂಘದಲ್ಲಿ ಭಾಷಣ, ಆಶುಭಾಷಣ, ಏಕಪಾತ್ರ ಅಭಿನಯ, ಪ್ರಹಸನ ಗಳನ್ನು ಪ್ರದರ್ಶಿಸಬಹುದು. ಆದರೆ ಈಗಿನ ವಿದ್ಯಾರ್ಥಿ ಗಳಲ್ಲಿ ಇಂಥ ಯಾವುದೇ ಚಟುವಟಿಕೆಗಳನ್ನು ಬೆಳೆಸಿ ಕೊಳ್ಳುವ ಆಸಕ್ತಿಯಿಲ್ಲದೆ ಸೊರಗಿ ಹೋಗುತ್ತಿದ್ದಾರೆ. ನಮ್ಮ ಯುವಜನತೆ ತಮ್ಮ ಕಣ್ಣ ತುಂಬ ಕನಸುಗಳನ್ನು ತುಂಬಿಕೊಂಡು, ಹಿ೦ದೆಂದಿಗಿಂತಲೂ ವೇಗವಾದ ಹೊರ ಜಗತ್ತಿಗೆ ಹೊಂದಿಕೊಳ್ಳುತ್ತಿರುವ ಹೆಮ್ಮೆಯ ಜೊತೆಗೆ, ಅವರೊಳಗೆ ವ್ಯವಸ್ಥೆಯೆಂದರೆ ಇಷ್ಟೇ ಎಂಬ ಪೂರ್ವ ನಿರ್ಧಾರಿತ ತೀರ್ಮಾನವೊಂದು ಮನೆ ಮಾಡಿದೆ. ಹಿರಿಯರೊಂದಿಗೆ ಆರೋಗ್ಯಕರ ಬಾಂಧವ್ಯ ವನ್ನು ಹೊಂದಬೇಕಾದ ಯುವಜನತೆ ಆಧುನಿಕ ಸ ತಂತ್ರಜ್ಞಾನದ ಸೆಳೆತಕ್ಕೆ ಮಾರುಹೋಗಿದ್ದಾರೆ. ಅಪ್ಪ ಅಮ್ಮನ ಸಂಬಂಧ ಹಾಸ್ಟೇಲ್ ಫೀಜ್ ಕಟ್ಟಲು ಮಾತ್ರ ಸೀಮಿತ. ಮುದುಕರು ಅನಾಥ ಆಶ್ರಮದಲ್ಲೋ, ಒಂಟಿ ಮನೆಯಲ್ಲೋ ಇರಲೆಂದು ಆಶಿಸುತ್ತಾರೆ. ಟವಿ, ಮೊಬೈಲ್, ಇಂಟರ್‌ನೆಟ್‌ಗಳ ಆನ್‌ಲೈನ್ ಕಾರ್ಯ ಕ್ರಮಕ್ಕೆ ಹಳ್ಳಿಗಿಂತ ನಗರವೇ ಉತ್ತಮ ಎಂದು ಬಯಸುತ್ತಾರೆ. ಹಾಗಾಗಿ ದಕ್ಷಿಣ ಕನ್ನಡದ ಬಹಳಷ್ಟು ಹಳ್ಳಿಗಳಲ್ಲಿ ಮುದುಕರು ಮಕ್ಕಳು ಮೊಮ್ಮಕ್ಕಳನ್ನು ದಾರಿನೋಡುತ್ತಾ ಕಾದು ಕುಳಿತಿದ್ದಾರೆ. ಬಹಳಷ್ಟು ಮನೆಗಳು ಖಾಲಿಯಾಗಿ ಬಿಕೋ ಎನ್ನುತ್ತಿವೆ. ಮನೆಯಿಂದ ಹೊರಹೋದ ನಮ್ಮ ಯುವಕರು ಚೆನ್ನಾಗಿದ್ದಾರೆಯೇ? ಇಂಥ ಪ್ರಶ್ನೆ ಮೂಡಿದರೆ “ಇಲ್ಲಿ ಸಲ್ಲದವರು ಅಲ್ಲೂ ಸಲ್ಲುವರಯ್ಯಾ' ಎಂಬ ಮಾತಿನಂತಾಗಿದೆ ಅವರ ಪರಿಸ್ಥಿತಿ. ಕುಟುಂಬದ ಕೂಡುಕಟ್ಟಲ್ಲ, ನೆಟ್ಟಗೆ ಸಂಸಾರ ಮಾಡಲು ಬರೋದಿಲ್ಲ. ತನ್ನನ್ನೇ ನಂಬಿ ಬಂದವರ ಗತಿಯೇನು? ಗೊತ್ತಿಲ್ಲ. ಒಂದಷ್ಟು ನೆಗೆಟಿವ್ ಚಿಂತನೆಗಳು ತಯಾರಾಗಿರುತ್ತವೆ. ಹೂವು, ಪ್ರಕೃತಿ, ಸಾಗರ, ಬೆಟ್ಟ, ಗುಡ್ಡಗಳಿಗೆ ಮಿಗಿಲಾಗಿ ದ್ವೇಷ, ಅಸೂಯೆ, ಸಿಟ್ಟು, ಸೆಡವುಗಳೇ ಅವರಲ್ಲಿ ಸ್ಥಾನ ಪಡೆದಿರುತ್ತವೆ.
ನಮ್ಮ ಸಮಾಜ ಅಷ್ಟೂ ಕೆಟ್ಟದೆಯೇ? ನಮ್ಮ ಯುವಜನತೆ ನಮ್ಮ ವ್ಯವಸ್ಥೆಯ ಬಗೆಗೆ ಇಷ್ಟು ರೋಸಿ ಹೋಗಿದ್ದಾರೆಯೇ? ಇದಕ್ಕೆಲ್ಲ ಕಾರಣಗಳನ್ನು ಹುಡುಕಲು ಹೊರಟರೆ ಬಹುಶಃ ಥಟ್ಟನೆ ಹೊಳೆಯುವ ಉತ್ತರವೆಂದರೆ ನಮ್ಮ ದಿನನಿತ್ಯದ ಜೀವನದಲ್ಲಿ ತೀರಾ ಪ್ರಭಾವಿಯಾಗಿರುವ ಕೆಲವು ಅಂಶಗಳು ಎಂದೆನಿಸುತ್ತದೆ. ಇಂದಿನ ಜೀವನ ಶೈಲಿಯ ಗಡಿಬಿಡಿಯಿಂದ ಓದು ಮರೆಯಾಗಿದೆ. ಅಥವಾ ಪರೀಕ್ಷೆ ಪಾಸು ಮಾಡುವ ಮಟ್ಟಗೆ ಸೀಮಿತವಾಗಿದೆ. ದಿನಪತ್ರಿಕೆ, ವಾರಪತ್ರಿಕೆಗಳನ್ನೂ ಓದುವ ವ್ಯವಧಾನವಿಲ್ಲ. ಬಿಡುವಿನ ವೇಳೆ ದೂರದರ್ಶನದ ಮುಂದೆ ಕುಳಿತು ರಿಯಾಲಿಟಯೇ ಇಲ್ಲದ ರಿಯಾಲಿಟಿ ಶೋಗಳನ್ನೋ ಧಾರಾವಾಹಿಗಳನ್ನೋ ಗಂಟೆಗಟ್ಟಲೆ ವರ್ಷಗಟ್ಟಲೆ ವೀಕ್ರಿಸುತ್ತಾರೆ. ಅದಕ್ಕಾಗಿ ಹೋಮ್‌ವರ್ಕನ್ನು ಕಾಟಾಚಾರಕ್ಕಾಗಿ ಮುಗಿಸುತ್ತಾರೆ. ಪಠ್ಯಪುಸ್ತಕದ ಪದ್ಮಭಾಗ, ಕತಾಭಾಗವನ್ನು ಇಡೀ ವರ್ಷ ಓದಿದರೂ ನೆನಪಿಗೆ ಬಾರದ್ದು ಒಂದೇ ವಾರದಲ್ಲಿ ಬಿಡುಗಡೆಯಾದ ಹಾಳುಮೂಳು ಸಿನಿಮಾದ ಲಯಕ್ಕೆ ಮೋಡಿಗಳಾಗುತ್ತಾರೆ. ಜನಪದ ಕುಣಿತದ ಒಂದೊಂದು ಹೆಜ್ಜೆಗೂ ಅರ್ಥವಿದ್ದರೂ ಅರ್ಥೈಸದ ಯುವಜನತೆ ಇರುವೆ ಕಚ್ಚಿದಾಗ ಮೈಯೆಲ್ಲ ಪರಚಿಕೊಳ್ಳುವ ಹಾಗಿರುವ ಕುಣಿತವನ್ನು ಬಹುಬೇಗನೆ ಅರ್ಥ ಮಾಡಿಕೊಳ್ಳುತ್ತಾರೆ.
ಪಠ್ಯ ಪುಸ್ತಕಗಳು ನೀತಿಕತೆಯ ಮೂಲಕ ಜೀವನ ಮೌಲ್ಯವನ್ನು ಕಟ್ಟಕೊಡಲು ಪ್ರಯತ್ನಿಸುತ್ತಿವೆ. ರಕ್ತ, ದ್ವೇಷ, ಕತ್ತಿ, ಲಾಂಗ್, ಮಚ್ಚು ಅಥವಾ ಭ್ರಮ ನಿರಸನಗಳು ಕಂಡಷ್ಟು ಪ್ರೀತಿ, ಪ್ರಕೃತಿ, ಪರಿಸರ ಅಥವಾ ಮನವೀಯತೆಗಳು ಇಂದಿನ ಯುವ ಬದುಕಿನಲ್ಲಿ ಕಾಣುತ್ತಿಲ್ಲ ಎಂಬುದು ನಿಜಕ್ಕೂ ಒಪ್ಪಿಕೊಳ್ಳಲೇಬೇಕಾದ ಸತ್ಯ. ನಲ್ಲ ನಲ್ಲೆಯರ ಸ್ವೇಚ್ಛಾಚಾರದ ಬದುಕಿಗೆ ಎಲ್ಲರೂ ತೆರೆದುಕೊಂಡಿದ್ದಾರೆ. ಮೊಬೈಲ್, ಫೆಸ್‌ಬುಕ್ ಹೀಗೆ ಇನ್ನೇನೋ ತಂತ್ರಜ್ಞಾನಗಳ, ಸಂವಹನ ಮಾಧ್ಯಮಗಳ ಮೂಲಕ ತಮ್ಮನ್ನು ಮಾಹಿತಿಲೋಕದಲ್ಲಿ ಬಿಚ್ಚಿಕೊಂಡು ಮರೆತಿದ್ದಾರೆ. ಮತ್ತು ಮೆರೆಯುತ್ತಿದ್ದಾರೆ. ಹುಟ್ಟಿನಿಂದ ಸಾವಿನವರೆಗಿನ ಎಲ್ಲ ಕ್ಷಣಗಳನ್ನು ಅಂತರ್ಜಾಲದಲ್ಲಿ ಸೋರೊದಕ್ಕೆ ಬಿಟ್ಟು ತಮ್ಮ ಬದುಕಿನಲ್ಲಿ ಯಾವುದೇ ಬಿರುಕಿಲ್ಲವೆಂದು ಇನ್ಕಾರನ್ನೋ ಲೈಕ್ ಮಾಡುತ್ತಾರೆ.
ನಮ್ಮ ಯುವ ಸಮುದಾಯದ ಮನಸ್ಸುಗಳು ಯರಾವುದೋ ಒಂದು ಅದರ್ಶದ ಹೆಸರಿನಲ್ಲಿ ಸಮಾಜದ ಹುಳುಕುಗಳನ್ನೇ ಗಮನಿಸುತ್ತಾ ಜೀವನದ ಸುಂದರಗಳಿಗೆಗಳನ್ನು ಕಳೆದುಕೊಳ್ಳುವುದರಲ್ಲಿ ಅರ್ಥವಿಲ್ಲ. ನಮ್ಮ ಸಂಬಂಧಗಳು ಸೋರಿ ಹೋಗುವುದರ ಮೊದಲು ಅವರನ್ನು ಪೂರ್ವಾಗಹಗಳಿಂದ ಹೊರತರಬೇಕಾಗಿದೆ. ಹಾಗಾಗಬೇಕಾದರೆ ಮನೆಯಿಂದ ಆರಂಭವಾಗಿ ಪ್ರಾಥಮಿಕ-ಮಾಧ್ಯಮಿಕ ಶಾಲೆಗಳಲ್ಲಿ ಮುಂದುವರಿಯಬೇಕು. ಕಾಲೇಜು ಜೀವನ ಆರಂಭವಾಗುವ ಪ್ರಾಯಕ್ಕೆ ಮಗುವಿನ ಮನಸ್ಸು ಮುಂದಿನ ಬದುಕಿಗೆ ತಯಾರಾಗಿ ಬರಬೇಕಾಗುತ್ತದೆ. "ಗಿಡವಾಗಿ ಬಾಗದ್ದು ಮರವಾಗಿ ಬಾಗೀತೆ' ಎಂಬ ನಾಣ್ಣುಡಿಯಂತೆ ಬೆಳೆದ ಮರಕ್ಕೆ ಮತ್ತೆ ಕೊಡಲಿ ಏಟು ಕಷ್ಟಸಾಧ್ಯ. “ಬೆಳೆಯುವ ಸಿರಿ ಮೊಳಕೆಯಲ್ಲಿದೆಯಂತೆ ಅದನ್ನು ಅರ್ಥೈಸುವ ಮನಸ್ಸು ಬೇಕು. ಆ ಮನಸ್ಸನ್ನು ತಂದೆ ತಾಯಿ ಅರ್ಥೈಸಿ ಅವರಿಗೆ ಮನೆಯಲ್ಲೇ ಬದುಕಿನ ಶಿಕ್ಷಣ ನೀಡಬೇಕು. ಆ ಮಗು ಶಾಲಾ ಶಿಕ್ಷಣದಲ್ಲಿ ಆಶಾಭಾವನೆಯಿಂದ ಬೆಳೆದರೆ ನಮ್ಮ ಸಮುದಾಯಗಳು ಒಡಕಿಲ್ಲದೆ ಸ್ಥಿರವಾಗಿ ಹೆಮ್ಮರವಾಗುವುದು. ಬದಲಾಗುತ್ತಿರುವ ಯುವ ಸಮುದಾಯಕ್ಕೆ ಉತ್ತಮ ಮಾರ್ಗದರ್ಶನ ಬೇಕು ಎಂಬ ಆಶಾಭಾವನೆ ನನ್ನದು.
ಕೊನೆ ಟಿಪ್ಪಣಿ
- ದಕ್ಷಿಣ ಕನ್ನಡದ ಬೇರೆ ಜಾತಿಯವರು ಗೌಡರನ್ನು “ಅಂಬಲಿಗೌಂಡ'ರೆಂದು ಇಂದಿಗೂ ತಮಾಷೆಗಾಗಿ ಕರೆಯುತ್ತಾರೆ.
- ದಕ್ಷಿಣ ಕನ್ನಡದ ಗೌಡರಿಗೆ ಎರಡು ಕಟ್ಟೆ ಮನೆಗಳಿವೆ. “ತುಳುಭಾಷೆ' ಮಾತನಾಡುವ ಪುತ್ತೂರು ಬಲ್ನಾಡು ಕಟ್ಟೆಮನೆ. [ಒಂಬತ್ತು ವರಾಗಣೆಗಳು - 1. ವಿಟ್ಲ ಅಮೈ., 2. ನರುವೊಳ್ಹಡಿ, 3. ಕುಂಟನಿ, 4. ಪಳ್ಳದಳ, 5. ವಲಂಬ್ರ, 6. ಬಜಿಲ ಹಿರೇಬಂಡಾಡಿ. 7. ಕಾಂತುರ ಮುಗೆರ್, 8. ಕನ್ನಡ್ಕ, 9. ಬಲ್ನಾಡ್]
“ಅರೆಭಾಷೆ' ಮಾತನಾಡುವ ಸುಳ್ಯದ ಕೂಜುಗೋಡು ಕಟ್ಟೆಮನೆ [ಒಂಬತ್ತು ಮಾಗಣೆಗಳು - 1. ಕೂಜುಗೋಡು, 2. ಉಳುವಾರು, 3. ಕುಂಚಡ್ಕ, 4. ಬಲ್ಲಡ್ಕ, 5. ಕುಡೆಕಲ್ಲು, 6. ದೇರಾಜೆ, 7. ಸಂಪಾಜೆ, 8, ಕುದ್ದಾಜೆ, 9. -9-]
- “ಸುಳ್ಯ ಪರಿಸರಕ್ಕೆ ಗೌಡರು ಮೂಲ ನಿವಾಸಿಗಳಲ್ಲ. ಇವರು ಹಾಸನ ಪರಿಸರದ ಐಗೂರು ಸೀಮೆಯಿಂದ ಕ್ರಿಶ. 1450-1600ರ ಮಧ್ಯೆ ಕರಾವಳಿಗೆ ವಲಸೆ ಬಂದಿದ್ದಾರೆ. ವಲಸೆ ಬಂದ ಕಾಲದಲ್ಲಿ ರಾಗಿ ಪ್ರಧಾನ ಬೆಳೆಯಾಗಿದ್ದರೂ ಅನಂತರದ ಕಾಲದಲ್ಲಿ ಆ ಸ್ಥಾನವನ್ನು ಬತ್ತ ಮತ್ತು ಅಡಿಕೆ ಆಕ್ರಮಿಸಿಕೊಂಡಿತು. ಬತ್ತವನ್ನು ಹಣವನ್ನಾಗಿ ಮಾರ್ಪಡಿಸುವ ಬ್ರಿಟಿಷರ ಧೋರಣೆಯನ್ನು ಪ್ರತಿಭಟಿಸಿದ ಗೌಡರು ಕ್ರಿಶ. 1830ರ ದಶಕದಲ್ಲಿ “ಅಮರಸುಳ್ಯದ ದಂಗೆ'ಗೆ ಕಾರಣ ಕರ್ತರಾದರು. ಪರಿಣಾಮವಾಗಿ ಆಳರಸರ ಅವಕೃಪೆಗೆ ತುತ್ತಾಗಿ ಹಿಂದುಳಿದರು. ಸ್ವಾತಂತ್ರ್ಯಾ: ನಂತರವೂ ಈ ಜನಾಂಗದ ಜೀವನ ಕ್ರಮದಲ್ಲಿ ಗಂಭೀರ ಬದಲಾವಣೆಗಳೇನೂ ಆಗಿಲ್ಲ”. (ಪುರುಷೋತ್ತಮ ಬಿಳಿಮಲೆ, 1990: ಪು 100)