ಅರಿಯಬೇಕು ಹರೆಯದ ಮನಸ
ಲೇಖಕರು: ಶ್ರೀದೇವಿ ಅಂಬೆಕಲ್ಲು
ವಿಜಯ ಕರ್ನಾಟಕ
ಲವಲವಿಕೆ ವಿಭಾಗ, ಬೆ೦ಗಳೂರು
ಆಂದು ಹದಿಹರೆಯದ ಹೆಣ್ಣು ಮಕ್ಕಳು ಮನೆಯಲ್ಲಿದ್ದರೆ ಅಮ್ಮನಿಗೆ ಪ್ರತಿದಿನವೂ
ಮನದೊಳಗೇ ಕಸಿವಿಸಿ. ಏನೋ ಒಂಥರಾ... ನನ್ನ ಮಗಳು ಎಲ್ಲಿ ಹಾದಿ ತಪ್ಪಿ ಬಿಡುತ್ತಾಳೋ
ಅನ್ನುವ ಸಂಶಯ ಕಾಡುತ್ತಿರುತ್ತದೆ. ಅಂತಹ ಸಂದರ್ಭಗಳಲ್ಲಿ ಕೌಟುಂಬಿಕ
ನಿಯಮಗಳನ್ನೇನೋ ಹೇರಿಬಿಡಬಹುದು. ಅದರ ಜತೆಗೆ ಅವರ ಸ್ವಾತಂತ್ರವನ್ನು
ಪ್ರೋತ್ಸಾಹಿಸಬೇಕು ಮತ್ತು ಅವರಲ್ಲಿ ಆತ್ಮವಿಶ್ವಾಸವನ್ನು ತುಂಬುವ ಕೆಲಸವನ್ನು ಮಾಡಬೇಕು.
ಹದಿಹರೆಯದ ಮಕ್ಕಳನ್ನು ನಿಭಾಯಿಸುವುದು ಬಹಳ ಕಷ್ಟ ಅದರಲ್ಲೂ ಹೆಣ್ಣು ಮಕ್ಕಳಾಗಿದ್ದರೆ ಅಮ್ಮನಿಗೇ ಪ್ರತಿದಿನವೂ ಮಗಳ ಬಗ್ಗೆಯೇ ಯೋಚನೆ. ಮಗಳು ಎಲ್ಲಿ ದಾರಿ ತಪ್ಪಿ ಬಿಡುತ್ತಾಳೋ ಏನೊ ಎಂಬ ಸಂಶಯ ಕಾಡುತ್ತಿರುತ್ತದೆ. ತನ್ನ ಮಗಳ ಬಗ್ಗೆ ಅನುಮಾನ ಬೆಳೆಯುತ್ತಾ ಹೋಗುತ್ತದೆ. ಅದೇ ಕಾರಣಕ್ಕೆ ಇರಬೇಕೇನೋ ಹರೆಯದ ಮಗಳು ಮತ್ತು ಅಮ್ಮನ ನಡುವೆ ಅದೆಷ್ಟೋ ಬಾರಿ ವಾದ ನಡೆಯುತ್ತಲೇ ಇರುತ್ತದೆ. ಇದು ಸಾಮಾನ್ಯ. ಆದರೆ ಮಗಳ ಬಗ್ಗೆ ಅಮ್ಮನಿಗಿರೋ ಅತಿಯಾದ ಕಾಳಜಿಯಿಂದಾಗಿಯೇ ಇಂತಹ ಸಂಘರ್ಷಗಳು ನಡೆಯುತ್ತಿರುತ್ತವೆ.
ಸಾಮಾಜಿಕವಾಗಿರಲಿ, ವೈಯಕ್ತಿಕವಾಗಿರಲಿ ಅಥವಾ ದೈಹಿಕವಾಗಿರಲಿ ಎಲ್ಲ ಅನುಭವಗಳು ಕೂಡ ಹದಿವಯಸ್ಸಿನ ಆಕೆಗದು ದೊಡ್ಡ ವಿಷಯವೇ. ಆಕೆ ತನ್ನ ಮನದಲ್ಲಾಗುವ ಭಾವನೆಗಳಲ್ಲಿನ ಬದಲಾವಣೆ ಯನ್ನು ನಿಜವೆಂದೇ ಭಾವಿಸುತ್ತಾಳೆ. ಇನ್ನು ಸಮಸ್ಯೆ ಗಳಾದರೆ, ಅದರಿಂದ ಹೊರಬರುವುದಕ್ಕೆ ಆಕೆಯಿಂದ ಸಾಧ್ಯವಾಗುವುದೇ ಇಲ್ಲ. ಹಾಗಂತ ಆಕೆ ಅದನ್ನು ಇನ್ನೊಬ್ಬರೊಂದಿಗೆ ಹಂಚಿಕೊಳ್ಳುವುದಕ್ಕೆ ಹೋಗುವುದೇ ಇಲ್ಲ. ಅಮ್ಮನೊಂದಿಗೂ ಕೂಡಾ.
ಹರೆಯದ ವಯಸ್ಸಿನಲ್ಲಿ ಆಕೆಯಲ್ಲಾಗುವ ಭಾವನೆಗಳು, ಸ್ವಾಭಾವಿಕ ದೈಹಿಕ ಬದಲಾವಣೆಗಳು ಮತ್ತು ಅದರಿಂದ ಆಕೆ ಅನುಭವಿಸುವ ಮಾನಸಿಕ ತೊಳಲಾಟಗಳಿಗೆ ಕಾರಣ ಏನು ಎಂಬುದು ಆಕೆಗಿನ್ನೂ ಅರಿವಿಲ್ಲ. ಅಂತಹ ಸಂದರ್ಭಗಳಲ್ಲಿ ಕೌಟುಂಬಿಕ ನಿಯಮಗಳನ್ನೇನೋ ಹೇರಬಹುದು. ಅದರ ಜತೆಗೆ ಅವರ ಸ್ವಾತಂತ್ರ್ಯವನ್ನು ಪ್ರೋತ್ಸಾಹಿಸಬೇಕು ಮತ್ತು ಅವರಲ್ಲಿ ಆತ್ಮವಿಶ್ವಾಸವನ್ನು ತುಂಬುವ ಕೆಲಸವನ್ನು ಮಾಡಬೇಕು.
ಹರೆಯದ ವಯಸಿನಲ್ಲಿ ಹಲವು ಸಮಸ್ಯೆಗಳನ್ನು ಆಕೆ ಎದುರಿಸುತ್ತಿರುತ್ತಾಳೆ. ಮುಖ್ಯವಾಗಿ ಟೀನೇಜ್ ಪೆಗ್ಗೆನ್ಸಿ ಹಾಗಾಗಿ ಲೈಂಗಿಕತೆಯ ಬಗ್ಗೆ ಮಕ್ಕಳಲ್ಲಿ ಚರ್ಚೆ ಮಾಡುವುದು ಅಗತ್ಯ. ಲೈಂಗಿಕತೆ ಮತ್ತು ಅದರಿಂದ ಹರಡುವ ಕಾಯಿಲೆಗಳ ಬಗ್ಗೆ ಹರೆಯದ ಮಕ್ಕಳಿಗೆ ಅರಿವು ಮೂಡಿಸಲೇಬೇಕು. ಹರೆಯದ ವಯಸಿನಲ್ಲಿ ತಪ್ಪು ಮಾಡದಂತೆ ಮಾಡಲು ಇಂದ್ರಿಯಗಳನ್ನು ನಿಗ್ರಹಿಸಿಕೊಳ್ಳುವ ಕುರಿತು ಸಲಹೆ ನೀಡಬೇಕು.
ಇದಲ್ಲದೆ ಹದಿಹರೆಯದವರು ಇತರ ಸಮಸ್ಯೆ ಗಳಿಗೆ ಅಂಟಿಕೊಳ್ಳುವ ಸಾಧ್ಯತೆಗಳು ಇಲ್ಲದಿಲ್ಲ. ಸಾಧಿಸಬೇಕೆಂದುಕೊಂಡಿದ್ದನ್ನು ಸಾಧಿಸಲಾಗದೇ ಹೋದಾಗ ಅಥವಾ ಪ್ರೀತಿ-ಪ್ರೇಮದಂತಹ ವಿಚಾರಗಳಲ್ಲಿ ನೋವು ಆದಾಗ ಆಕೆಗೆ ತಾನೇನು ಮಾಡಬೇಕು ಎಂಬುದೇ ಗೊತ್ತಾಗುವುದಿಲ್ಲ. ಆಗ ದೈಹಿಕವಾಗಿ ಗಾಯ ಮಾಡಿಕೊಳ್ಳುವುದು, ಖಿನ್ನರಾಗಿರುವುದು, ಸಹಪಾಠಿಗಳೊಂದಿಗೆ ತಮ್ಮನ್ನು ಹೋಲಿಕೆ ಮಾಡಿಕೊಳ್ಳುವುದು, ಇವೇ ಮೊದಲಾದ ಮಾನಸಿಕ ಸಮಸ್ಯೆಗಳೂ ಅವರನ್ನು ಕಾಡುತ್ತಿರುತ್ತದೆ. ಹೆತ್ತವರು ಮುಖ್ಯವಾಗಿ ಗಮನಿಸಬೇಕಾದುದ್ದು ಅಂದರೆ ಯಾವತ್ತೂ ಹದಿಹರೆಯದ ಹೆಣ್ಣುಮಕ್ಕಳು ತಮ್ಮ ಸಮಸ್ಯೆಯನ್ನು ತನ್ನ ತಾಯಿಯೊಂದಿಗೂ ಹಂಚಿಕೊಳ್ಳುವುದಕ್ಕೆ ಹಿಂಜರಿಯುತ್ತಾಳೆ. ತಾನು ಅನುಭವಿಸುತ್ತಿರುವ ಸಮಸ್ಯೆಗಳನ್ನು ಹೇಳಿಕೊಳ್ಳುವುದಕ್ಕೆ ಇಷ್ಟಪಡುವುದಿಲ್ಲ; ಹೇಳಿಕೊಳ್ಳುವುದೂ ಇಲ್ಲ.
ಹಾಗಾಗಿ ಹರೆಯದ ಹೆಣ್ಣು ಮಗಳಲ್ಲಿ ಸಮಸ್ಯೆಗಳಾನೇದಾರೂ ಇದ್ಯಾ ಎಂಬುದನ್ನು ಗುರುತಿಸಿಕೊಳ್ಳಿ. ಮಕ್ಕಳಲ್ಲಿ ಖನ್ನತೆಯ ಸಮಸ್ಯೆಯಿದ್ದರೆ ಅವರ ಹಾವಭಾವಗಳಲ್ಲಿ ವ್ಯಕ್ತವಾಗುತ್ತದೆ. ದುಡುಕಿನ ವರ್ತನೆ, ಶಾಲೆ ಬಂಕ್ ಮಾಡುವುದು, ಮನೆ ಬಿಟ್ಟು ಓಡಿ ಹೋಗುವುದು. ಸುಳ್ಳು ಹೇಳುವುದು ಹಾಗೂ ಶಾಲಾ ಚಟುವಟಕೆಗಳಲ್ಲಿನ ಸಮಸ್ಯೆಗಳು, ಆತ್ಮಹತ್ಯೆ ಮಾಡಿಕೊಳ್ಳುವಂತಹ ಲಕ್ಷಣಗಳು ಮತ್ತು ಹಿಂಸಾತ್ಮಕ ನಡವಳಿಕೆಗಳನ್ನು ಕೂಡಾ ಗಮನಿಸಬೇಕು. ಹದಿಹರೆಯದ ಮಗಳಲ್ಲಿ ಇಂತಹ ಲಕ್ಷಣಗಳು ಕಾಣಿಸಿಕೊಂಡರೆ ತಕ್ಷಣ ಕ್ರಮ ಕೈಗೊಳ್ಳಿ. ಸಮಸ್ತೆಗಳಿದಲ್ಲಿ ವೈದ್ಯರ ಸಲಹೆ ಕೊಡಿಸುವುದೊಳಿತು.
ಹದಿಹರೆಯದ ಮಗಳಲ್ಲಿ ಬೆಳೆಯುತ್ತಿರುವ ಹಾರ್ಮೋನುಗಳು ಮತ್ತು ಬದಲಾಗುತ್ತಿರುವ ಭಾವನೆಗಳಿಂದಾಗಿ ಮಕ್ಕಳಲ್ಲಿ ಹರೆಯದ ಲಕ್ಷಣಗಳು ಗುರುತಿಸಬಹುದು. ಹದಿಹರೆಯದ ಹೆಣ್ಣು ಮಗಳು ಅಮ್ಮನೊಂದಿಗೆ ಪ್ರತಿದಿನ ಎರಡೂವರೆ ದಿನಗಳಿಗೊಮ್ಮೆ ೧೫ ನಿಮಿಷ ವಾದ ಮಾಡುತ್ತಾಳೆ ಎಂಬುದಾಗಿ ಸಮೀಕ್ಷೆಯೊಂದು ತಿಳಿಸಿದೆ. ಅಮ್ಮನೇ ಮಗಳಿಗೆ ಬೆಸ್ಟ್ ಫೆಂಡ್. ಮಿತಿಮೀರಿದ ನಿರೀಕ್ಷೆಗಳು ಮಗಳದ್ದಾಗಿರುತ್ತದೆ. ಅವುಗಳನ್ನೆಲ್ಲಾ ನಿಯಂತ್ರಣದಲ್ಲಿಟ್ಟುಕೊಳ್ಳುವಂತೆ ಮಗಳಿಗೆ ಸಲಹೆ ನೀಡುವುದು ಬಹಳ ಅಗತ್ಯ ಅಂತಹ ಸಲಹೆಗಳನ್ನು ನೀಡುವುದಕ್ಕೆ ಆಕೆಯಿಂದ ಮಾತ್ರ ಸಾಧ್ಯ.
ಹರೆಯದ ಮಗಳೊಂದಿಗೆ ಚರ್ಚಿಸುವಾಗ ಅಮ್ಮ ತುಂಬಾ ನಿಗಾ ವಹಿಸಲೇಬೇಕು. ಆಕೆಗೆ ಹರ್ಟ್ ಆಗುವ ರೀತಿಯಲ್ಲಿ ಮಾತನಾಡಕೂಡದು ಮತ್ತು ಅವಳೊಂದಿಗೆ ಸಂಘರ್ಷಕ್ಕಿಳಿದರೂ ಅವಳನ್ನು ನೋಯಿಸಬಾರದು. ಸಲಹೆಗಳನ್ನು ನೀಡುವುದಾದರೂ ಹೇಳಬೇಕಾದ್ದನ್ನು ಹೇಳುವ ರೀತಿಯಲ್ಲಿ ಹೇಳಿದರೆ ಒಳ್ಳೆಯದು. ತಾನು ಹೇಳಿದ ರೀತಿಯಲ್ಲಿ ಆ ಮಾತಿಗೆ ಎಷ್ಟು ಪ್ರಾಮುಖ್ಯತೆ ಇದೆ ಎಂಬುದನ್ನು ಹೇಳಿ ತೋರಿಸಿ.
ಹೆಚ್ಚಾಗಿ ಹೆಣ್ಣು ಮಕ್ಕಳು ಕೊರಗೋದು, ಅಮ್ಮ ನನ್ನ ಮಾತಿಗೆ ಬೆಲೆ ನೀಡಲಿಲ್ಲ, ನನ್ನನ್ನು ಗೌರವಿಸಿಲ್ಲ ಎಂದು. ಅದಕ್ಕಾಗಿ ಅವರು ತೀರಾ ನೊಂದುಕೊಳ್ಳುತ್ತಾರೆ ಕೂಡಾ. ಮಕ್ಕಳ ಜತೆಗಿನ ಒಳ್ಳೆಯ ಸಂವಹನವೂ ಕೂಡಾ ಹರೆಯದ ಹೆಣ್ಣು ಮಕ್ಕಳಲ್ಲಿ ಕಾಣಿಸಿಕೊಳ್ಳುವ ಸಮಸ್ಯೆಗಳಿಗೆ ಉತ್ತರ ದೊರಕಿಸಿಕೊಡುತ್ತದೆ. ಹರೆಯದಲ್ಲಿ ತಮ್ಮನ್ನು ಬೇರೆಯವರೊಂದಿಗೆ ಹೋಲಿಸಿಕೊಂಡು ದುಃಖಿಸುತ್ತಾರೆ.
ಒಡಹುಟ್ಟಿದವರೊಂದಿಗಿನ ಜಗಳ, ಗೆಳೆಯರೊಂದಿಗೆ ಸಂಘರ್ಷ ಎಲ್ಲವೂ ಈ ವಯಸ್ಸಿನಲ್ಲಿ ಸಹಜ. ಅಂತಹ ಸಹಜವಾದ ಗುಣಗಳಿಗೆ ಸಲಹೆ ನೀಡಬಹುದೇ ಹೊರತು, ಅವರನ್ನು ಗದರಿಸುವುದಕ್ಕೆ ಹೋಗದಿರಬಾರದು. ಇನ್ನೊಂದು ಸಮಸ್ಯೆ ಅಂದರೆ ಹೆಚ್ಚು ಖರ್ಚು ಮಾಡುವುದು. ಹಣವನ್ನು ಹೇಗೆ ನಿಭಾಯಿಸಬೇಕು, ಖರ್ಚು ವೆಚ್ಚವನ್ನು ಹೇಗೆ ಕಡಿಮೆ ಮಾಡಿಕೊಳ್ಳಬಹುದು ಎಂಬುದರ ಬಗ್ಗೆಯೂ ಸಲಹೆ ನೀಡಿರಿ. ಹರೆಯದ ಹೆಣ್ಣುಮಕ್ಕಳ ಜಗತ್ತು ಎಷ್ಟು ವಿಭಿನ್ನ ಎಂಬುದನ್ನು ತಿಳಿಸಿ ಹೇಳಬೇಕು.