ಡಾ. ಮೀರಾಮಣಿ ಅವರಿಗೆ ಆಸ್ಟ್ರೇಲಿಯಾದಲ್ಲಿ ಪ್ರತಿಷ್ಠಿತ ಜಾಗತಿಕ ಸಮ್ಮೇಳನದ ಸಂಯೋಜಕ ಸ್ಥಾನ
ನಮ್ಮ ದಕ್ಷಿಣ ಕನ್ನಡ ಗೌಡ ಕ್ಷೇಮಾಭಿವೃದ್ಧಿ ಸಂಘದ ಸಕ್ರೀಯ ಸದಸ್ಯರಾದ ಹೆಮ್ಮೆಯ ಡಾ. ಮೀರಾಮಣಿ ಅವರು ಆಸ್ಟ್ರೇಲಿಯಾದ ಚಾರ್ಲ್ಸ್ ಡಾರ್ವಿನ್ ವಿಶ್ವವಿದ್ಯಾಲಯದಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಸಮ್ಮೇಳನವೊಂದರಲ್ಲಿ ಸಂಯೋಜಕರಾಗಿ ಆಯ್ಕೆಯಾಗಿದ್ದಾರೆ. ಜೂನ್ 22 ರಿಂದ 28 ರವರೆಗೆ ಆಯೋಜಿಸಲಾಗಿರುವ 10ನೇ ವಿಶ್ವ ಪುರಾತತ್ವ ಕಾಂಗ್ರೆಸ್ (World Archaeological Congress - WAC-10) ಸಮ್ಮೇಳನದಲ್ಲಿ ಈ ಪ್ರಮುಖ ಜವಾಬ್ದಾರಿಯನ್ನು ಅವರು ನಿರ್ವಹಿಸಲಿದ್ದಾರೆ.
ಡಾ. ಮೀರಾಮಣಿ ಅವರನ್ನು "ಸೆಕ್ರೆಡ್ ನರೇಟಿವ್ಸ್ ಆಂಡ್ ರಿಚುವಲ್ ಎಕ್ಸ್‌ಪ್ರೆಶನ್ಸ್: ಎಕ್ಸ್‌ಪ್ಲೋರಿಂಗ್ ಸೌತ್ ಏಷಿಯಾಸ್ ಫೋಕ್ ಟ್ರೆಡಿಷನ್ಸ್ ಆಂಡ್ ಕಲ್ಚರಲ್ ಕಂಟಿನ್ಯೂಟಿ" ಎಂಬ ವಿಷಯದ ವಿಶಿಷ್ಟ ಗೋಷ್ಠಿಯ ಸಂಯೋಜಕರನ್ನಾಗಿ ನೇಮಕ ಮಾಡಲಾಗಿದೆ. ಈ ಗೋಷ್ಠಿಯು ದಕ್ಷಿಣ ಏಷ್ಯಾದ ಜಾನಪದ ಸಂಪ್ರದಾಯಗಳು ಮತ್ತು ಸಾಂಸ್ಕೃತಿಕ ನಿರಂತರತೆಯನ್ನು ಧಾರ್ಮಿಕ ನಿರೂಪಣೆಗಳು ಮತ್ತು ಆಚರಣೆಗಳ ಮೂಲಕ ಅನ್ವೇಷಿಸುವ ಗುರಿ ಹೊಂದಿದೆ.
ಸಮ್ಮೇಳನದಲ್ಲಿ ಡಾ. ಮೀರಾಮಣಿ ಅವರು ಎರಡು ಮಹತ್ವದ ಸಂಶೋಧನಾ ಪ್ರಬಂಧಗಳನ್ನು ಮಂಡಿಸಲಿದ್ದಾರೆ. ಮೊದಲ ಪ್ರಬಂಧವು "ಡಿಜಿಟಲ್ ಪ್ರಿಸರ್ವೇಶನ್ ಆಂಡ್ ಕಲ್ಚರಲ್ ಹೆರಿಟೇಜ್ ಇನ್ ಇಂಡಿಯಾ : ವಿತ್ ಸ್ಪೆಷಲ್ ರೆಫರೆನ್ಸ್ ಟು ಇನ್ಸ್‌ಟಿಟ್ಯೂಷನಲ್ ರೆಪೊಸಿಟರೀಸ್ ಇನ್ ಕರ್ನಾಟಕ ಸ್ಟೇಟ್" ವಿಷಯದ ಕುರಿತಾಗಿದ್ದು, ಭಾರತದಲ್ಲಿ, ವಿಶೇಷವಾಗಿ ಕರ್ನಾಟಕ ರಾಜ್ಯದಲ್ಲಿ ಸಾಂಸ್ಥಿಕ ಭಂಡಾರಗಳ ಮೂಲಕ ಡಿಜಿಟಲ್ ರೂಪದಲ್ಲಿ ಸಾಂಸ್ಕೃತಿಕ ಪರಂಪರೆಯನ್ನು ಹೇಗೆ ಸಂರಕ್ಷಿಸಬೇಕು ಎಂಬುದರ ಕುರಿತು ಬೆಳಕು ಚೆಲ್ಲಲಿದೆ. ಎರಡನೆಯ ಪ್ರಬಂಧವು "ಫೋಕ್ ಕಲ್ಚರ್ ಇನ್ ಇಂಡಿಯಾ : ರಿಚುವಲ್ ಆಂಡ್ ಸ್ಪಿರಿಚುಯಲ್ ಪ್ರಾಕ್ಟೀಸ್ ಇನ್ ತುಳುನಾಡು" ಕುರಿತು ಕೇಂದ್ರೀಕೃತವಾಗಿದ್ದು, ತುಳುನಾಡಿನ ಶ್ರೀಮಂತ ಜಾನಪದ ಸಂಸ್ಕೃತಿ, ಆಚರಣೆಗಳು ಮತ್ತು ಆಧ್ಯಾತ್ಮಿಕ ಪದ್ಧತಿಗಳ ಬಗ್ಗೆ ಆಳವಾದ ವಿಶ್ಲೇಷಣೆ ನೀಡಲಿದೆ.
ಈ ಪ್ರತಿಷ್ಠಿತ ಜಾಗತಿಕ ವೇದಿಕೆಯಲ್ಲಿ ಸುಮಾರು 70ಕ್ಕೂ ಹೆಚ್ಚು ದೇಶಗಳ ಸಂಶೋಧಕರು, ಪುರಾತತ್ವಶಾಸ್ತ್ರಜ್ಞರು ಮತ್ತು ವಿದ್ವಾಂಸರು ಭಾಗವಹಿಸಿ ತಮ್ಮ ಅಧ್ಯಯನ, ಸಂಶೋಧನೆ ಹಾಗೂ ವಿಚಾರಗಳನ್ನು ಹಂಚಿಕೊಳ್ಳಲಿದ್ದಾರೆ. ಈ ಸಮ್ಮೇಳನವು ಪುರಾತತ್ವಶಾಸ್ತ್ರ ಮತ್ತು ಸಾಂಸ್ಕೃತಿಕ ಅಧ್ಯಯನ ಕ್ಷೇತ್ರಗಳಲ್ಲಿ ಹೊಸ ಆಲೋಚನೆಗಳು ಮತ್ತು ಸಹಯೋಗಗಳಿಗೆ ವೇದಿಕೆ ಕಲ್ಪಿಸಲಿದೆ.
ಇವರು ಕುದ್ಮಾರು ಗ್ರಾಮದ ನೂಜಿ ದಿ.ಲಿಂಗಪ್ಪ ಗೌಡ ಮತ್ತು ದುಗ್ಗಮ್ಮ ದಂಪತಿಗಳ ಪುತ್ರಿ. ಇವರು ಕಡಬ ತಾಲೂಕಿನ ಎಡಮಂಗಲ ಗ್ರಾಮದ ಆನಂದ ಪರ್ಲ ಗೌಡರ ಪತ್ನಿ. ಪ್ರಾಥಮಿಕ ಶಿಕ್ಷಣವನ್ನು ಕುದ್ಮಾರು ಸರ್ಕಾರಿ ಶಾಲೆಯಲ್ಲಿ, ಪ್ರೌಢಶಿಕ್ಷಣವನ್ನು ಎಡಮಂಗಲದಲ್ಲಿ, ಪದವಿಪೂರ್ವ ಶಿಕ್ಷಣವನ್ನು ಕಾಣಿಯೂರು ಕಾಲೇಜಿನಲ್ಲಿ ಪೂರೈಸಿದ್ದಾರೆ. ಇವರು ಪ್ರಸ್ತುತ ಬೆಂಗಳೂರಿನ ಜೈನ್ ಯೂನಿವರ್ಸಿಟಿನಲ್ಲಿ ಲೈಬ್ರರಿಯನ್ ಆಗಿ ಕಾರ್ಯನಿರ್ವಹಿಸುತ್ತಾ ಬೆಂಗಳೂರಿನಲ್ಲಿ ನೆಲೆಸಿದ್ದಾರೆ.
Links:
https://puttur.suddinews.com/archives/893512
https://www.nammakudlanews.com/conference-at-charles-darwin-university-australia-dr-meeramani-n-selected-as-coordinator/
https://veekaynews.com/dr-meeramani-as-charles-darwin-university-conference-coordinator-of-australia/
https://vtvvitla.com/dr-meeramani-n-selected-as-coordinator-of-the-conference-to-be-held-at-charles-darwin-university-australia/